2013ರ ಐಪಿಎಲ್ ಬೆಟ್ಟಿಂಗ್ ವಿವಾದದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಎಳೆದುತಂದ ಸುಮಾರು ಒಂದು ದಶಕದ ನಂತರ, ಭಾರತದ ಮಾಜಿ ನಾಯಕ ಸಲ್ಲಿಸಿದ್ದ ₹100 ಕೋಟಿ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಕೈಗೆತ್ತಿಕೊಂಡಿದ್ದು, ಸೋಮವಾರ (ಆಗಸ್ಟ್ 11) ವಿಚಾರಣೆ ಪ್ರಾರಂಭಿಸಲು ಆದೇಶಿಸಿದೆ. ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ನ್ಯಾಯಾಲಯದ ಆವರಣದಿಂದ ದೂರದಲ್ಲಿ ಧೋನಿ ಅವರ ಸಾಕ್ಷ್ಯವನ್ನು ದಾಖಲಿಸಲು ವಕೀಲ ಆಯುಕ್ತರನ್ನು ನೇಮಿಸಿತು.
ದಿ ಹಿಂದೂ ವರದಿ ಪ್ರಕಾರ, ಧೋನಿಯ ಸೆಲೆಬ್ರಿಟಿ ಸ್ಥಾನಮಾನ ಮತ್ತು ನ್ಯಾಯಾಲಯದಲ್ಲಿ ಅವರ ದೈಹಿಕ ಉಪಸ್ಥಿತಿಯು ಉಂಟುಮಾಡಬಹುದಾದ ವ್ಯವಸ್ಥಾಪನಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ಸಿವಿ ಕಾರ್ತಿಕೇಯನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2014ರಲ್ಲಿ ಜೀ ಮೀಡಿಯಾ ಕಾರ್ಪೊರೇಷನ್, ಪತ್ರಕರ್ತ ಸುಧೀರ್ ಚೌಧರಿ, ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಮತ್ತು ನ್ಯೂಸ್ ನೇಷನ್ ನೆಟ್‌ವರ್ಕ್ ವಿರುದ್ಧ ಸಲ್ಲಿಸಲಾದ ವಿಚಾರಣೆಯು ಹಲವಾರು ಅರ್ಜಿಗಳು ಮತ್ತು ಕಾರ್ಯವಿಧಾನದ ವಿಳಂಬದಿಂದಾಗಿ ವರ್ಷಗಳ ಕಾಲ ಸ್ಥಗಿತಗೊಂಡಿತ್ತು.
ಹಿರಿಯ ವಕೀಲ ಪಿಆರ್ ರಾಮನ್ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಧೋನಿ ವಿಚಾರಣೆಯನ್ನು ತ್ವರಿತಗೊಳಿಸಲು ಇಚ್ಛಿಸಿದ್ದಾರೆ. 'ಒಂದು ದಶಕಕ್ಕೂ ಹೆಚ್ಚು ಕಾಲ ಹೈಕೋರ್ಟ್‌ನಲ್ಲಿ ಬಾಕಿ ಇರುವ ಮೊಕದ್ದಮೆಯ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ತಪ್ಪಿಸುವ ಮತ್ತು ಮೊಕದ್ದಮೆಯ ನ್ಯಾಯಯುತ ಮತ್ತು ತ್ವರಿತ ತೀರ್ಪನ್ನು ಬೆಂಬಲಿಸುವ ಉದ್ದೇಶದಿಂದ ವಿನಂತಿ ಮಾಡಲಾಗಿದೆ. ನಾನು ಅಡ್ವೊಕೇಟ್ ಆಯುಕ್ತರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಮತ್ತು ವಿಚಾರಣೆ ಮತ್ತು ಸಾಕ್ಷ್ಯಗಳ ದಾಖಲಾತಿಗೆ ಸಂಬಂಧಿಸಿದಂತೆ ಈ ಗೌರವಾನ್ವಿತ ನ್ಯಾಯಾಲಯ ಹೊರಡಿಸಿದ ಎಲ್ಲ ನಿರ್ದೇಶನಗಳನ್ನು ಪಾಲಿಸುತ್ತೇನೆ' ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ನಿಖರವಾದ ಸ್ಥಳ ಮತ್ತು ದಿನಾಂಕಗಳನ್ನು ಪಕ್ಷಗಳು ಪರಸ್ಪರ ನಿರ್ಧರಿಸುವ ಮೂಲಕ ಅಕ್ಟೋಬರ್ 20 ರಿಂದ ಡಿಸೆಂಬರ್ 10 ರವರೆಗೆ ಧೋನಿ ಎಕ್ಸಾಮಿನೇಷನ್ ಮತ್ತು ಕ್ರಾಸ್-ಎಕ್ಸಾಮಿನೇಷನ್‌ಗೆ ಲಭ್ಯವಿರುವುದಾಗಿ ದೃಢಪಡಿಸಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿರುವ ವಕೀಲ ಆಯುಕ್ತರನ್ನು ನ್ಯಾಯಾಲಯವು ನಿರ್ವಹಿಸುವ ಅಧಿಕೃತ ಪಟ್ಟಿಯಿಂದ ಆಯ್ಕೆ ಮಾಡಲಾಗುವುದು ಎಂದು ನ್ಯಾಯಮೂರ್ತಿ ಕಾರ್ತಿಕೇಯನ್ ಭರವಸೆ ನೀಡಿದರು.
2023ರ ಡಿಸೆಂಬರ್‌ನಲ್ಲಿ, ಮಾನನಷ್ಟ ಪ್ರಕರಣದಲ್ಲಿ ತಮ್ಮ ಪ್ರತಿವಾದದ ಸಮಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ವಿರುದ್ಧದ ಹೇಳಿಕೆಗಳಿಗಾಗಿ ನಿವೃತ್ತ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗಾಗಿ ವಿಭಾಗೀಯ ಪೀಠವು ದೋಷಿ ಎಂದು ಘೋಷಿಸಿತು. ಅವರಿಗೆ 15 ದಿನಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿತು. ನಂತರ 2024 ರಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿತು.
Advertisement