
ಲಂಡನ್: ಭಾರತೀಯ ಕ್ರಿಕೆಟ್ ರಂಗವನ್ನು ಮುಜುಗರಕ್ಕೀಡು ಮಾಡಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವಿನ ಕಪಾಳ ಮೋಕ್ಷ ಪ್ರಕರಣ (IPL Slapgate)ದ ವಿಡಿಯೋ ಕೊನೆಗೂ ಬರೊಬ್ಬರಿ 18 ವರ್ಷಗಳ ಬಳಿಕ ಬಿಡುಗಡೆಯಾಗಿದ್ದು, ಈ ವಿಡಿಯೋವನ್ನು ಅಂದಿನ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಬಿಡುಗಡೆ ಮಾಡಿದ್ದಾರೆ.
2008ರಲ್ಲಿ ನಡೆದಿದ್ದ ಭಾರತದ ಮೊಟ್ಟ ಮೊದಲ ಐಪಿಎಲ್ ಟೂರ್ನಿಯಲ್ಲಿ ನಡಿದ್ದ ಕಪಾಳಮೋಕ್ಷ ಪ್ರಕರಣದ ವಿಡಿಯೋವನ್ನು ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ (Lalit Modi) ಬರೊಬ್ಬರಿ 18 ವರ್ಷಗಳ ಬಳಿಕ ಕೊನೆಗೂ ಬಿಡುಗಡೆ ಮಾಡಿದ್ದಾರೆ.
ಐಪಿಎಲ್ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಲೀಗ್ ಆಗಿ ಬೆಳೆದು ಜಾಗತಿಕ ಕ್ರೀಡಾ ವಿದ್ಯಮಾನವಾಗಿ ಮಾರ್ಪಟ್ಟಿದ್ದರೂ, ಐಪಿಎಲ್ 2008 ರ ಮೊದಲ ಆವೃತ್ತಿಯ ಒಂದು ಘಟನೆಯನ್ನು ದೀರ್ಘಕಾಲದವರೆಗೆ ರಹಸ್ಯವಾಗಿಡಲಾಗಿತ್ತು.
2008ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ, ಮುಂಬೈನ ಹರ್ಭಜನ್ ಸಿಂಗ್ ಪಂಜಾಬ್ ವೇಗಿ ಎಸ್ ಶ್ರೀಶಾಂತ್ ಅವರಿಗೆ ಪಂದ್ಯ ಮುಕ್ತಾಯದ ಬಳಿಕ ಕಪಾಳಮೋಕ್ಷ ಮಾಡಿದ್ದರು.
ಪಂದ್ಯ ಸೋತ ಆಕ್ರೋಶದಲ್ಲಿ ಭಜ್ಜಿ ತಮ್ಮತ್ತ ಹಸ್ತಲಾಘವಕ್ಕಾಗಿ ಬಂದ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದರು. ಈ ವೇಳೆ ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರು ಹಾಕಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಘಟನೆಯ ವಿಡಿಯೋ ಇದೇ ಮೊದಲ ಬಾರಿಗೆ 18 ವರ್ಷಗಳ ಬಳಿಕ ಬಿಡುಗಡೆಯಾಗಿದೆ.
ಬಿಯಾಂಡ್23 ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಮೈಕೆಲ್ ಕ್ಲಾರ್ಕ್ ಅವರ ಜೊತೆ ಸಂದರ್ಶನದಲ್ಲಿ ಲಲಿತ್ ಮೋದಿ ವಿಶ್ವಾದ್ಯಂತ ಪ್ರಸಾರದಲ್ಲಿ ಮೂಲತಃ ತೋರಿಸದ ದೃಶ್ಯಗಳ ತುಣುಕನ್ನು ಹಂಚಿಕೊಂಡಿದ್ದಾರೆ.
ಲಲಿತ್ ಮೋದಿ ಹೇಳಿದ್ದೇನು?
"ಆಟ ಮುಗಿದಿತ್ತು, ಕ್ಯಾಮೆರಾಗಳು ಆಫ್ ಆಗಿದ್ದವು. ನನ್ನ ಭದ್ರತಾ ಕ್ಯಾಮೆರಾಗಳಲ್ಲಿ ಒಂದು ಆನ್ ಆಗಿತ್ತು. ಅದು ಶ್ರೀಶಾಂತ್ ಮತ್ತು ಭಜ್ಜಿ (ಹರ್ಭಜನ್) ನಡುವಿನ ಘಟನೆಯನ್ನು ಸೆರೆಹಿಡಿಯಿತು. ಭಜ್ಜಿ ಅವರಿಗೆ ಬ್ಯಾಕ್-ಹ್ಯಾಂಡರ್ ನೀಡುತ್ತಾನೆ. ವೀಡಿಯೊ ಇಲ್ಲಿದೆ," ಎಂದು ಲಲಿತ್ ಮೋದಿ ಹೇಳಿದರು.
ಭಜ್ಜಿ ವಿಷಾಧ
ಇತ್ತೀಚೆಗೆ, ಹರ್ಭಜನ್ ಶ್ರೀಶಾಂತ್ ಜೊತೆಗಿನ ಹಲ್ಲೆ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೆ 'ಅವಕಾಶ ಸಿಕ್ಕರೆ ತಮ್ಮ ವೃತ್ತಿಜೀವನದಿಂದ ಈ ಒಂದು ಕ್ಷಣವನ್ನು ಅಳಿಸಲು ಬಯುತ್ತೇನೆ ಎಂದು ಹೇಳಿದ್ದರು.
"ನನ್ನ ಜೀವನದಲ್ಲಿ ನಾನು ಬದಲಾಯಿಸಲು ಬಯಸುವ ಒಂದು ವಿಷಯವೆಂದರೆ ಶ್ರೀಶಾಂತ್ ಅವರೊಂದಿಗಿನ ಆ ಘಟನೆ. ಆ ಘಟನೆಯನ್ನು ನನ್ನ ವೃತ್ತಿಜೀವನದಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಆ ಘಟನೆಯನ್ನು ನಾನು ನನ್ನ ಪಟ್ಟಿಯಿಂದ ಬದಲಾಯಿಸುತ್ತೇನೆ.
ಏನು ತಪ್ಪಾಗಿತ್ತೋ ನಾನು ಅದನ್ನು ಮಾಡಬಾರದಿತ್ತು. ನಾನು 200 ಬಾರಿ ಕ್ಷಮೆಯಾಚಿಸಿದೆ. ಆ ಘಟನೆಯ ನಂತರವೂ ನನಗೆ ತುಂಬಾ ಕೆಟ್ಟದಾಗಿ ಅನಿಸಿದ್ದು, ನನಗೆ ಸಿಕ್ಕ ಪ್ರತಿಯೊಂದು ಅವಕಾಶ ಅಥವಾ ಹಂತದಲ್ಲೂ ನಾನು ಕ್ಷಮೆಯಾಚಿಸುತ್ತಿದ್ದೇನೆ. ಅದು ತಪ್ಪು," ಎಂದು ಹರ್ಭಜನ್ ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಸಂವಾದದಲ್ಲಿ ಹೇಳಿದ್ದರು.
ಏನಿದು ಕಪಾಳ ಮೋಕ್ಷ ಪ್ರಸಂಗ?
2008ರಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮುಗಿದ ಬಳಿಕ ಈ ಘಟನೆ ನಡೆದಿತ್ತು. ಎರಡೂ ತಂಡಗಳ ಆಟಗಾರರು ಔಪಚಾರಿಕವಾಗಿ ಕೈಕುಲುಕುತ್ತಿದ್ದ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕಪಾಳಕ್ಕೆ ಹೊಡೆದಿದ್ದರು. ಕಪಾಳಕ್ಕೆ ಹೊಡೆದ ದೃಶ್ಯ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಅದೇ ನೊಂದ ಶ್ರೀಶಾಂತ್ ಅವರು ಅತ್ತಿದ್ದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು.
ಈ ಘಟನೆಗೆ ಕಾರಣ ಏನೆಂದು ತಿಳಿದಿಲ್ಲ. ಆದರೆ ಶ್ರೀಶಾಂತ್ ಹೇಳಿದ ಯಾವುದೋ ಮಾತಿನಿಂದ ಹರ್ಭಜನ್ ಸಿಂಗ್ ಕೋಪಗೊಂಡಿರಬಹುದು ಎಂದು ಹೇಳಲಾಗಿದೆ. ಘಟನೆಯಿಂದಾಗಿ ಹರ್ಭಜನ್ ಸಿಂಗ್ ಅವರನ್ನು ಆ ಸೀಸನ್‌ನ ಉಳಿದ ಪಂದ್ಯ ಮತ್ತು ಮುಂದಿನ 11 ಪಂದ್ಯಗಳಿಗೆ ನಿಷೇಧಿಸಲಾಯಿತು.
ಹರ್ಭಜನ್ ಸಿಂಗ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಂತರ ಇಬ್ಬರೂ ಹಳೇ ನೋವು ಮರೆತು ಪರಸ್ಪರ ಚೆನ್ನಾಗಿದ್ದಾರೆ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರ ಶಾಶ್ವತವಾಗಿ ಕಪ್ಪುಚುಕ್ಕೆಯಾಗಿಯೇ ಉಳಿದಿದೆ. ಇದೀಗ ಆ ಘಟನೆಯ ವಿಡಿಯೋ ಬಹಿರಂಗಗೊಂಡು ಮತ್ತೆ ಹಳೇ ಸಂಗತಿ ಕೆದಕಿದಂತಾಗಿದೆ. ಶ್ರೀಶಾಂತ್ ಮಗಳು ತನ್ನ ಬಗ್ಗೆ ಬೇಸರ ಹೊಂದಿದ್ದಾಳೆ ಎಂದು ಹರ್ಭಜನ್ ಇತ್ತೀಚೆಗಷ್ಟೇ ತಿಳಿಸಿದ್ದರು.
Advertisement