ಬರೋಬ್ಬರಿ 18 ವರ್ಷಗಳ ಟ್ರೋಫಿ ಬರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025ನೇ ಆವೃತ್ತಿಯಲ್ಲಿ ನೀಗಿಸಿದೆ. ಈ ಮೂಲಕ ಬಹುಕಾಲದಿಂದ ಅಭಿಮಾನಿಗಳು ಕಾಯುತ್ತಿದ್ದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಬೀಗಿದೆ. ಹೌಲಿಹಾನ್ ಲೋಕೆ ವರದಿ ಪ್ರಕಾರ, ಐಪಿಎಲ್ 2025ರ ನಂತರ ಆರ್‌ಸಿಬಿ ಅನ್ನು $ 269 ಮಿಲಿಯನ್ ಮೌಲ್ಯದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಎಂದು ಅಂದಾಜಿಸಲಾಗಿದೆ.
ಇತರ ತಂಡಗಳಿಗೆ ಹೋಲಿಸಿದರೆ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ, 2025ರ ಜೂನ್ ಆರಂಭದಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಬಳಿಕ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ದಿಗ್ಗಜರನ್ನು ಹಿಂದಿಕ್ಕಿ ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ವರದಿ ಪ್ರಕಾರ, RCB ಯ ಬ್ರ್ಯಾಂಡ್ ಮೌಲ್ಯವು 2024 ರಲ್ಲಿ $227 ಮಿಲಿಯನ್‌ನಿಂದ 2025 ರಲ್ಲಿ $269 ಮಿಲಿಯನ್‌ಗೆ ಅಂದರೆ ಶೇ 18.5 ರಷ್ಟು ಏರಿಕೆಯಾಗಿದೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ (MI) ಎರಡನೇ ಸ್ಥಾನದಲ್ಲಿದೆ. 2024 ರಲ್ಲಿ $204 ಮಿಲಿಯನ್‌ನಿಂದ 2025 ರಲ್ಲಿ $242 ಮಿಲಿಯನ್‌ಗೆ ಅಂದರೆ ಶೇ 18.6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಸಿಎಸ್‌ಕೆ ಬ್ರಾಂಡ್ ಮೌಲ್ಯವು $231 ಮಿಲಿಯನ್‌ನಿಂದ $235 ಮಿಲಿಯನ್‌ಗೆ ಅಂದರೆ ಕೇವಲ ಶೇ 1.7 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಫ್ರಾಂಚೈಸಿಯು ಇದೀಗ ಅತಿ ಹೆಚ್ಚು ಬೆಳವಣಿಗೆ ಕಾಣುತ್ತಿರುವ ತಂಡವಾಗಿದೆ ಎಂದು ವರದಿ ಹೇಳುತ್ತದೆ. 2024 ರಲ್ಲಿ $101 ಮಿಲಿಯನ್ ಮೌಲ್ಯವನ್ನು ಹೊಂದಿದ್ದ ತಂಡವು 2025 ರಲ್ಲಿ ಶೇ 39.6 ರಷ್ಟು ಏರಿಕೆ ಕಂಡಿದೆ ಮತ್ತು ಐಪಿಎಲ್ 2025ರ ನಂತರ $141 ಮಿಲಿಯನ್ ಮೌಲ್ಯಕ್ಕೆ ಏರಿದೆ. ಇತ್ತ ಎಲ್ಎಸ್‌ಜಿ 2024 ರಲ್ಲಿ $91 ಮಿಲಿಯನ್ ನಿಂದ 2025 ರಲ್ಲಿ $122 ಮಿಲಿಯನ್‌ಗೆ ಅಂದರೆ ಶೇ 34.1 ರಷ್ಟು ಬೆಳವಣಿಗೆ ಕಂಡಿದ್ದರೂ ಸಹ, ಇತರ ಐಪಿಎಲ್ ತಂಡಗಳಿಗೆ ಹೋಲಿಸಿದರೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅತ್ಯಂತ ಕಡಿಮೆ ಮೌಲ್ಯ ಹೊಂದಿದೆ.
Advertisement