

ರಾಂಚಿ: ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಟೀಂ ಇಂಡಿಯಾ ತಂಗಿದ್ದ ಹೊಟೆಲ್ ಲಾಬಿಯಲ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ಮಾತಿನ ಚಕಮಕಿ ನಡೆದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ನಿನ್ನೆ ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 17 ರನ್ ಗಳ ಅಂತರದಲ್ಲಿ ರೋಚಕ ಜಯಸಾಧಿಸಿತ್ತು. ಈ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ತಂಗಿದ್ದ ಹೊಟೆಲ್ ನಲ್ಲಿ ಆಟಗಾರರ ಸಂಭ್ರಮಾಚರಣೆ ನಡೆದಿತ್ತು.
ಈ ವೇಳೆ ತಂಡದ ನಾಯಕ ಕೆಎಲ್ ರಾಹುಲ್ ಕೇಕ್ ಕತ್ತರಿಸುವಾಗ ಪಕ್ಕದಲ್ಲೇ ಇದ್ದ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಗಂಭೀರವಾಗಿ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಇಬ್ಬರೂ ಯಾವ ವಿಚಾರದ ಕುರಿತು ಮಾತನಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲವಾದರೂ, ಇಬ್ಬರ ನಡುವಿನ ಈ ಸಂಭಾಷಣೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಾದವನ್ನು ಪುಷ್ಟೀಕರಿಸುವಂತಿತ್ತು.
ಸಿಬ್ಬಂದಿಗಳ ಒತ್ತಾಯದ ಹೊರತಾಗಿಯೂ ಸಂಭ್ರಮದಲ್ಲಿ ಪಾಲ್ಗೊಳ್ಳದ ಕೊಹ್ಲಿ
ಇದೇ ವೇಳೆ ಅತ್ತ ರೋಹಿತ್-ಗೌತಿ ಮಾತಿನ ಸಂಘರ್ಷ ಇತ್ತ ನಾಯಕ ಕೆಎಲ್ ರಾಹುಲ್ ಕೇಕ್ ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ವಿರಾಟ್ ಕೊಹ್ಲಿ ಕೂಡ ಬಂದರು. ಈ ವೇಳೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹೊಟೆಲ್ ಸಿಬ್ಬಂದಿ ಅವರನ್ನು ಕರದೆರು. ಆದರೆ ಕೊಹ್ಲಿ ಅವರ ಮಾತಿಗೆ ಕಿವಿಗೊಡದೆ ತಮ್ಮ ಮೊಬೈಲ್ ನಲ್ಲಿ ಏನೋ ನೋಡುತ್ತಾ ಸಂಭ್ರಮಾಚರಣೆ ನಿರ್ಲಕ್ಷಿಸಿ ಮುಂದಕ್ಕೆ ನಡೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇಷ್ಟು ಮಾತ್ರವಲ್ಲದೇ ಪಂದ್ಯ ಮುಕ್ತಾಯದ ಬಳಿಕವೂ ಕೊಹ್ಲಿ ಇದೇ ರೀತಿ ಕೋಚ್ ಗೌತಮ್ ಗಂಭೀರ್ ರನ್ನು ನಿರ್ಲಕ್ಷಿಸಿದ್ದರು. ಕೊಹ್ಲಿ ಡ್ರೆಸಿಂಗ್ ರೂಮಿಗೆ ತೆರಳುವಾಗ ಅಲ್ಲಿ ಗಂಭೀರ್ ಇದುದ್ದನ್ನು ನೋಡಿ ತಮ್ಮ ಜೇಬಿನಿಂದ ಮೊಬೈಲ್ ತೆಗೆದು ಅದನ್ನು ನೋಡುತ್ತಾ ಪಕ್ಕಕ್ಕೆ ನಡೆದುಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ.
ರೋ-ಕೋ ಮತ್ತು ಗಂಭೀರ್ ನಡುವೆ ಶೀಥಲ ಸಮರ?
ಇನ್ನು ವರದಿಗಳ ಪ್ರಕಾರ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ತಂಡದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಕೊಹ್ಲಿ ಮತ್ತು ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ. ಗಂಭೀರ್ ಮತ್ತು ಇಬ್ಬರು ದಿಗ್ಗಜರ ನಡುವಿನ ಸಂಬಂಧ ತಣ್ಣಗಾಗಿದೆ ಎಂದು ವರದಿಯಾಗಿದೆ. "ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧಗಳು ಉತ್ತಮವಾಗಿಲ್ಲ. ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಸಭೆ ನಡೆಯುವ ಸಾಧ್ಯತೆ ಇದೆ. ಇದು ರಾಯ್‌ಪುರ ಅಥವಾ ವಿಶಾಖಪಟ್ಟಣದಲ್ಲಿ ನಡೆಯಬಹುದು ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಿಸಿಸಿಐ ತುರ್ತು ಸಭೆ
ಇದಕ್ಕೆ ಇಂಬು ನೀಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ರಾಯ್‌ಪುರದಲ್ಲಿ ಆರಂಭವಾಗುವ ಮೊದಲು ಬಿಸಿಸಿಐ ಸಭೆ ಆಯೋಜಿಸಿದೆ ಎಂದು ವರದಿಯಾಗಿದೆ. ಕೋಚ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಬಿಸಿಸಿಐನ ಕೆಲವು ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ಸಭೆಯಲ್ಲಿ ಕೊಹ್ಲಿ ಮತ್ತು ರೋಹಿತ್ ಭಾಗವಹಿಸುವ ಕುರಿತು ಇನ್ನೂ ಸ್ಪಷ್ಟತೆ ಇಲ್ಲ ಎಂದು ವರದಿಯಾಗಿದೆ.
Advertisement