

ರಾಯ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದ ಹೊರತಾಗಿಯೂ ಹೀನಾಯ ಸೋಲು ಕಂಡಿದ್ದು, ಪಂದ್ಯದ ಸೋಲಿಗೆ ಕಾರಣವಾದ ಅಂಶಗಳನ್ನು ನಾಯಕ ಕೆಎಲ್ ರಾಹುಲ್ ಪಟ್ಟಿ ಮಾಡಿದ್ದಾರೆ.
ರಾಯ್‌ಪುರದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 359ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಮಾರ್ಕ್ರಾಮ್ (110)ಶತಕ, ಬ್ರೀಟ್ಜ್ಕೆ (68), ಬ್ರೇವಿಸ್ (54 ರನ್) ಅರ್ಧಶತಕ ಮತ್ತು ನಾಯಕ ಬವುಮಾ 46 ರನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 49.2 ನಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ 4 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
ಇನ್ನು ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ವೇಳೆ ಮಾತನಾಡಿದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ತಂಡದ ಸೋಲಿಗೆ ಕಾರಣವಾದ ಅಂಶಗಳ ಕುರಿತು ಮಾತನಾಡಿದರು.
'ಭಾರತ ಬೌಲಿಂಗ್ ವೇಳೆ ಇಬ್ಬನಿ ಇತ್ತು. ಈ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವುದು ಕಷ್ಟಕರವಾಗಿತ್ತು. ಅದಾಗ್ಯೂ ಅಂಪೈರ್ ಗಳು ಚೆಂಡನ್ನು ಬದಲಾಯಿಸಿದರು. ಈ ಪಂದ್ಯದಲ್ಲಿ ಟಾಸ್ ದೊಡ್ಡ ಪಾತ್ರವಹಿಸಿತು. ಟಾಸ್ ಸೋತಿದ್ದು ಹಿನ್ನಡೆಯಾಯಿತು. ಇದಕ್ಕೆ ನನ್ನನ್ನು ನಾನೇ ಶಪಿಸಿಕೊಳ್ಳುತ್ತಿದ್ದೆ ಎಂದು ರಾಹುಲ್ ಹೇಳಿದರು.
20 ರನ್ ಗಳ ಕೊರತೆ
ಅಂತೆಯೇ ಭಾರತ ತಂಡ 359 ರನ್ ಗಳನ್ನು ಕಲೆಹಾಕಿದ್ದರೂ ತಂಡಕ್ಕೆ ಇನ್ನೂ 20 ರನ್ ಗಳ ಕೊರತೆ ಎದುರಾಗಿತ್ತು ಎಂದು ನಾಯಕ ಕೆಎಲ್ ರಾಹುಲ್ ಹೇಳಿದರು. 'ನಾವು ಇನ್ನೂ ಉತ್ತಮವಾಗಿ ಮಾಡಬಹುದಾದ ಕೆಲಸಗಳಿದ್ದವು. 350 ರನ್‌ಗಳು ಚೆನ್ನಾಗಿ ಕಾಣುತ್ತವೆ ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿನ ಮಾತುಕತೆ ವೇಳೆ ಹೆಚ್ಚುವರಿ 20-25 ರನ್‌ಗಳನ್ನು ಹೇಗೆ ಪಡೆಯುವುದು ಎಂಬುದಾಗಿತ್ತು. ತಂಡ 20 ರನ್ ಗಳ ಕೊರತೆ ಎದುರಿಸಿತು ಎಂದರು.
ರುತು-ಕೊಹ್ಲಿ ಆಟ ಅದ್ಭುತ
ಇದೇ ವೇಳೆ ಕೊಹ್ಲಿ ಮತ್ತು ರುತು ರಾಜ್ ಬ್ಯಾಟಿಂಗ್ ಕುರಿತು ಮಾತನಾಡಿದ ಕೆಎಲ್ ರಾಹುಲ್, 'ರುತು ಮತ್ತು ವಿರಾಟ್ ಬ್ಯಾಟಿಂಗ್ ನೋಡುವುದು ಸುಂದರವಾಗಿತ್ತು. ಅವರು ತಮ್ಮ ಕೆಲಸವನ್ನು ಮಾಡುವುದನ್ನು ಮುಂದುವರಿಸುತ್ತಾರೆ, ರುತುರಾಜ್ ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು, ಅವರು ಬ್ಯಾಟಿಂಗ್ ಮಾಡಿದ ಗತಿ ನಮಗೆ ಹೆಚ್ಚುವರಿ 20 ರನ್‌ಗಳನ್ನು ನೀಡಿತು.
ಆದರೆ ಕೆಳ ಕ್ರಮಾಂಕವು ಹೆಚ್ಚಿನ ಕೊಡುಗೆ ನೀಡಬಹುದಿತ್ತು. ಇಂದು ನಾನು ಮೊದಲ ಬಾರಿಗೆ 6 ನೇ ಸ್ಥಾನದಿಂದ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡೆ. ವಿರಾಟ್ ಮತ್ತು ರುಟು ಗತಿಯನ್ನು ಹೊಂದಿಸಿದ್ದರು. ಅದೇ ರನ್ ಗತಿ ಮುಂದುವರೆಸಬೇಕಾಗಿತ್ತು. ಕಳೆದ ಪಂದ್ಯದಲ್ಲಿ ನಾನು ಅರ್ಧಶತಕ ಗಳಿಸಿದ್ದೆ, ಆತ್ಮವಿಶ್ವಾಸದಿಂದಿದ್ದೆ, ಆದ್ದರಿಂದ 5 ನೇ ಸ್ಥಾನದಲ್ಲಿ ವಾಕ್ ಇನ್ ಆಗುವುದು ಉತ್ತಮ ಎಂದು ಭಾವಿಸಿದ್ದೆ ಎಂದರು.
ರನ್ ಗಳಿಗೆ ಕಡಿವಾಣ ಬೇಕಿತ್ತು
ಇದೇ ವೇಳೆ ಆಫ್ರಿಕಾ ಇನ್ನಿಂಗ್ಸ್ ವೇಳೆ ಒಂದಷ್ಟು ರನ್ ಗಳಿಗೆ ನಾವು ಕಡಿವಾಣ ಹಾಕಬೇಕಿತ್ತು ಎಂದು ರಾಹುಲ್ ಹೇಳಿದರು. ಹೆಚ್ಚುವರಿ ರನ್ ಗಳು, ಮಿಸ್ ಫೀಲ್ಡಿಂಗ್, ಓವರ್ ಥ್ರೋಗಳನ್ನು ತಡೆದಿದ್ದರೆ ಆಫ್ರಿಕಾ ಮೇಲೆ ಒತ್ತಡ ಹೇರಬಹುದಿತ್ತು ಎಂದು ರಾಹುಲ್ ಹೇಳಿದರು.
Advertisement