ರಾಯಪುರದಲ್ಲೂ 'ಕಿಂಗ್ ಕೊಹ್ಲಿ'ಯದ್ದೇ ಕಾರುಬಾರು: ಕ್ರಿಕೆಟ್ 'ದೇವರು' ಸಚಿನ್ ದಾಖಲೆ ಮುರಿದ 'ರನ್ ಮಷಿನ್'!
ರಾಯಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡರೂ, 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಅವರು, ಅಭಿಮಾನಿಗಳು ಸದಾ ನೆನಪಿಸಿಕೊಳ್ಳುವಂತಹ ಬ್ಯಾಟಿಂಗ್ ಮಾಡಿದ್ದಾರೆ.
ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, 93 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 102 ರನ್ ಗಳಿಸಿದರು. ಇದು ಈ ಮಾದರಿಯಲ್ಲಿ ಅವರ 53ನೇ ಶತಕವಾಗಿದೆ. ಕೊಹ್ಲಿ ಶತಕ ಬಾರಿಸಿದ್ದು ಮಾತ್ರವಲ್ಲದೆ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಶತಕದ ಜೊತೆಯಾಟ ಆಡಿದರು. ಈ ಮೂಲಕ ತಂಡವನ್ನು 200 ರನ್ಗಳ ಗಡಿ ಕೂಡ ದಾಟಿಸಿದರು.
ಕ್ರಿಕೆಟ್ ಲೋಕದ 'ಕಿಂಗ್' ಎನಿಸಿಕೊಂಡಿರುವ ಕೊಹ್ಲಿ, ಈ ಪಂದ್ಯದಲ್ಲಿ ಋತುರಾಜ್ ಗಾಯಕವಾಡ (105) ಅವರೊಂದಿಗೆ ಸೇರಿ 4ನೇ ವಿಕೆಟ್ ಪಾಲುದಾರಿಕೆಯಲ್ಲಿ 195 ರನ್ ಕಲೆಹಾಕಿದರು. ಇದರೊಂದಿಗೆ 33ನೇ ಸಲ 150ಕ್ಕಿಂತ ಅಧಿಕ ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಈ ರೀತಿಯ ಪಾಲುದಾರಿಕೆಯಲ್ಲಿ ಕೊಹ್ಲಿಗೆ ಜೊತೆಯಾದ 14ನೇ ಆಟಗಾರ ಗಾಯಕವಾಡ. ಅತಿಹೆಚ್ಚು (32) ಸಲ ಇಂತಹ ಜೊತೆಯಾಟವಾಡಿದ ದಾಖಲೆ ಇದುವರೆಗೆ, ಈ ಆಟದ 'ದೇವರು' ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಅದನ್ನು ಈಗ 'ಕಿಂಗ್' ಕೊಹ್ಲಿ ಮುರಿದರು.
ವಿರಾಟ್ ಕೊಹ್ಲಿ, ರಾಯಪುರದಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 34 ಬೇರೆಬೇರೆ ಕ್ರೀಡಾಂಗಣಗಳಲ್ಲಿ ಮೂರಂಕಿ ಗಡಿ ದಾಟಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರೂ ಇಷ್ಟೇ ಕ್ರೀಡಾಂಗಣಗಳಲ್ಲಿ ಶತಕ ಬಾರಿಸಿದ್ದಾರೆ.
ಡಿಸೆಂಬರ್ 3, ಬುಧವಾರ ರಾಯ್‌ಪುರದ ಶಹೀದ್ ವೀರನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದಾಗ್ಯೂ, ಈ ಬಾರಿ ರೋಹಿತ್ ಶರ್ಮಾ ಬೇಗನೆ ಔಟಾದರು. ಯಶಸ್ವಿ ಜೈಸ್ವಾಲ್ ಕೂಡ ಸ್ವಲ್ಪ ಸಮಯದ ನಂತರ ಪೆವಿಲಿಯನ್‌ಗೆ ಮರಳಿದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ವಿರಾಟ್ ಕೊಹ್ಲಿ (102), ಯುವ ಆಟಗಾರ ಋತುರಾಜ್ ಗಾಯಕವಾಡ್ (105) ಸಿಡಿಸಿದ ಶತಕ ಹಾಗೂ ನಾಯಕ ಕೆ.ಎಲ್. ರಾಹುಲ್ (ಅಜೇಯ 66) ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್ ಕಲೆಹಾಕಿತು.
ಇದು ಮಾತ್ರವಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಸತತ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಶತಕ ಗಳಿಸಿದ್ದು ಇದು 11 ನೇ ಬಾರಿ. ಇದು ವಿಶ್ವ ದಾಖಲೆಯಾಗಿದೆ. ಆರು ಬಾರಿ ಈ ಸಾಧನೆ ಮಾಡಿರುವ ಎಬಿ ಡಿವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದು, ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಶತಕಗಳನ್ನು ಸಹ ಪೂರೈಸಿದ್ದಾರೆ.


