

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನಾ ತಮ್ಮ ವೈಯಕ್ತಿಕ ಜೀವನದ ಸುತ್ತ ವಾರಗಟ್ಟಲೆ ಕೇಳಿಬರುತ್ತಿದ್ದ ಸಾರ್ವಜನಿಕ ಮತ್ತು ಮಾಧ್ಯಮ ಊಹಾಪೋಹಗಳಿಗೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ಅವರ ಬಹುನಿರೀಕ್ಷಿತ ವಿವಾಹವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಈ ವಿಚಾರವನ್ನು ಘೋಷಿಸಿದ್ದಾರೆ. ಸ್ಮೃತಿ ಮಂಧಾನಾ ಅವರು ಕಳೆದ ತಿಂಗಳು ಮದುವೆಯನ್ನು ಹಠಾತ್ತನೆ ಮುಂದೂಡಿದ ನಂತರ ಸಾಕಷ್ಟು ವದಂತಿಗಳು ಕೇಳಿಬಂದಿದ್ದವು.
'ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಸುತ್ತ ಸಾಕಷ್ಟು ಊಹಾಪೋಹಗಳು ಹಬ್ಬಿವೆ ಮತ್ತು ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಆದರೆ, ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಬೇಕಾಗಿದೆ' ಎಂದು ಸ್ಮೃತಿ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆ ನೀಡಿದ್ದಾರೆ.
'ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುತ್ತೇನೆ ಮತ್ತು ನೀವೆಲ್ಲರೂ ಅದೇ ರೀತಿ ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ಪ್ರಕ್ರಿಯೆಗೊಳಿಸಲು ಮತ್ತು ನಮ್ಮದೇ ಆದ ವೇಗದಲ್ಲಿ ಮುಂದುವರಿಯಲು ನಮಗೆ ಅವಕಾಶ ಮಾಡಿಕೊಡಿ' ಎಂದು ಮನವಿ ಮಾಡಿದ್ದಾರೆ.
'ನಮ್ಮೆಲ್ಲರಲ್ಲೂ ಮತ್ತು ನನಗೆ ನನ್ನ ದೇಶವನ್ನು ಯಾವಾಗಲೂ ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವ ಒಂದು ಮಹತ್ತರ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ ಮತ್ತು ನನ್ನ ಗಮನವು ಶಾಶ್ವತವಾಗಿ ಅಲ್ಲೇ ಇರುತ್ತದೆ' ಎಂದಿದ್ದಾರೆ.
ಐದು ವರ್ಷಗಳ ರಿಲೇಷನ್‌ಶಿಪ್‌ನಲ್ಲಿದ್ದ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ಮದುವೆಯನ್ನು ನವೆಂಬರ್ 23, 2025 ರಂದು ನಿಗದಿಪಡಿಸಲಾಗಿತ್ತು. ಆದರೆ, ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹಠಾತ್ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾದ ನಂತರ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ನಂತರ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ವರದಿಗಳು ಬಂದಿದ್ದವು.
ಆರಂಭದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಮದುವೆಯನ್ನು ಮುಂದೂಡಲಾಗಿದೆ ಎಂದೇ ಹೇಳಿಕೆ ನೀಡಿದ್ದರೂ, ಸ್ಮೃತಿ ಮಂಧಾನ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಅಳಿಸಿದ್ದರು. ಇದು ವ್ಯಾಪಕ ವದಂತಿಗೆ ಕಾರಣವಾಗಿತ್ತು. ಬಳಿಕ ನಿಶ್ಚಿತಾರ್ಥದ ಉಂಗುರವಿಲ್ಲದೆ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ ಮದುವೆ ನಿಂತಿರುವ ಕುರಿತು ಊಹಾಪೋಹಗಳು ತೀವ್ರಗೊಂಡವು. ಇದೀಗ ಸ್ಮೃತಿ ಮಂಧಾನ ಅವರೇ ಎಲ್ಲ ವದಂತಿಗಳಿಗೆ ತೆರೆಎಳೆದಿದ್ದಾರೆ.
ಮುಂಬರುವ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿರುವ ಮಂಧಾನಾಗೆ ಈ ಘೋಷಣೆ ನಿರ್ಣಾಯಕ ಸಮಯದಲ್ಲಿ ಬಂದಿದೆ. ಅವರ ಆಪ್ತ ಸ್ನೇಹಿತೆ ಮತ್ತು ತಂಡದ ಸಹ ಆಟಗಾರ್ತಿ ಜೆಮಿಮಾ ರೊಡ್ರಿಗಸ್, ಆಘಾತದ ಸಮಯದಲ್ಲಿ ಸ್ಮೃತಿ ಅವರೊಂದಿಗೆ ಇರಲು ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ನಿಂದ ಹಿಂದೆ ಸರಿದಿದ್ದರು.
Advertisement