

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಾಲಾಶ್ ಮುಚ್ಚಲ್ ಅವರು ತಮ್ಮ ಮದುವೆ ರದ್ದಾದ ಬೆನ್ನಲ್ಲೇ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡಿದ್ದಾರೆ.
ಮದುವೆ ರದ್ದು ಕುರಿತು ಇಬ್ಬರೂ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಇದಕ್ಕೂ ಮೊದಲು ವಿವಾಹ ರದ್ಧತಿ ಕುರಿತು ಸ್ಪಷ್ಟನೆ ನೀಡಿದ್ದ ಸ್ಮೃತಿ ಮಂಧಾನ, 'ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಸುತ್ತ ಸಾಕಷ್ಟು ಊಹಾಪೋಹಗಳು ಹಬ್ಬಿವೆ ಮತ್ತು ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಆದರೆ, ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಬೇಕಾಗಿದೆ' ಎಂದು ಪೋಸ್ಟ್ ಮಾಡಿದ್ದಾರೆ.
ಅಂತೆಯೇ ಪಲಾಶ್ ಮುಚ್ಚಲ್ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದು, 'ನನ್ನ ಜೀವನದಲ್ಲಿ ಮುಂದುವರಿಯಲು ಮತ್ತು ನನ್ನ ವೈಯಕ್ತಿಕ ಸಂಬಂಧದಿಂದ ಹಿಂದೆ ಸರಿಯಲು ನಾನು ನಿರ್ಧರಿಸಿದ್ದೇನೆ. ನನಗೆ ಅತ್ಯಂತ ಪವಿತ್ರವಾದ ವಿಷಯದ ಬಗ್ಗೆ ಆಧಾರರಹಿತ ವದಂತಿಗಳಿಗೆ ಜನರು ಅಷ್ಟು ಸುಲಭವಾಗಿ ಪ್ರತಿಕ್ರಿಯಿಸುವುದನ್ನು ನೋಡುವುದು ನನಗೆ ತುಂಬಾ ಕಷ್ಟಕರವಾಗಿದೆ. ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಹಂತವಾಗಿದೆ ಮತ್ತು ನಾನು ನನ್ನ ನಂಬಿಕೆಗಳೊಂದಿಗೆ ಅದನ್ನು ನಿಭಾಯಿಸುತ್ತೇನೆ' ಎಂದಿದ್ದಾರೆ.
ಅದ್ದೂರಿಯಾಗಿ ನಡೆಯುತ್ತಿದ್ದ ವಿವಾಹ ರದ್ದಾಗಿತ್ತು!
ಸ್ಮೃತಿ ಹಾಗೂ ಪಾಲಾಶ್ ಅವರ ನಿಶ್ಚಿತಾರ್ಥ ನವೆಂಬರ್ 21ರಂದು ನಡೆದಿತ್ತು. ನವೆಂಬರ್ 23ರಂದು ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು. ಅದಕ್ಕೂ ಮುನ್ನ ವಿವಾಹಪೂರ್ವ ಕಾರ್ಯಕ್ರಮಗಳೆಲ್ಲವೂ ಅದ್ಧೂರಿಯಾಗಿಯೇ ನಡೆದಿದ್ದವು. ಆದರೆ, ಆ ನಂತರ ಅನಿರೀಕ್ಷಿತ ಬೆಳವಣಿಗೆಗಳಾದವು.
ಸ್ಮೃತಿ ತಂದೆಗೆ ಹೃದಯಾಘಾತ
ಇನ್ನು ವಿವಾಹ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಕಾರಣಕ್ಕೆ, ವಿವಾಹ ದಿನಾಂಕವನ್ನು ಮುಂದೂಡಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು.
ಬಳಿಕ, ಈ ಇಬ್ಬರ ಸಂಬಂಧದ ಕುರಿತು ಹಲವು ವದಂತಿಗಳು ಹರಡಿದ್ದವು. ಪಲಾಶ್ ಅವರಿಗೆ ಮತ್ತೊಬ್ಬರೊಂದಿಗೆ ಸಂಬಂಧವಿದೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ, ಆ ಯಾವುದಕ್ಕೂ ಸ್ಮೃತಿ ಅಥವಾ ಪಲಾಶ್ ಕಡೆಯಿಂದ; ಇಲ್ಲವೇ, ಇಬ್ಬರ ಮನೆಯವರಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಸ್ವತಃ ಸ್ಮೃತಿ ಮಂಧಾನ ಎಲ್ಲ ವದಂತಿಗಳಿಗೆ ಇಂದು ತೆರೆ ಎಳೆದಿದ್ದು, 'ನಮ್ಮ ಮದುವೆ ರದ್ದಾಗಿದೆ' ಎಂದು ಸ್ಪಷ್ಟ ಪಡಿಸಿದ್ದಾರೆ.
Advertisement