ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ವೃಂದಾವನದ ವರಾಹ್ ಘಾಟ್‌ನಲ್ಲಿರುವ ಪ್ರೇಮಾನಂದ್ ಜಿ ಮಹಾರಾಜ್ ಅವರ ಶ್ರೀ ಹಿಟ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ, ಕೊಹ್ಲಿ ಮತ್ತು ಅನುಷ್ಕಾ ಅವರು ಪ್ರೇಮಾನಂದ್ ಜಿ ಮಹಾರಾಜ್ ಅವರೊಂದಿಗೆ ಆಧ್ಯಾತ್ಮಿಕ ಸಂಭಾಷಣೆ ಮಾಡುತ್ತಿರುವುದನ್ನು ಕಾಣಬಹುದು.
ಭಜನ್ ಮಾರ್ಗ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರೇಮಾನಂದ ಮಹಾರಾಜ್ ಕೊಹ್ಲಿ ಮತ್ತು ಅನುಷ್ಕಾಗೆ ತಮ್ಮ ಕೆಲಸವನ್ನು 'ದೇವರ ಸೇವೆ' ಎಂದು ಪರಿಗಣಿಸುವಂತೆ ಹೇಳಿದ್ದಾರೆ. 'ನಿಮ್ಮ ಕೆಲಸವನ್ನು ದೇವರ ಸೇವೆ ಎಂದು ಪರಿಗಣಿಸಿ. ಗಂಭೀರವಾಗಿ ಮತ್ತು ವಿನಮ್ರರಾಗಿರಿ ಮತ್ತು ಸರ್ವಶಕ್ತನನ್ನು ಪ್ರಾರ್ಥಿಸಿ' ಎಂದು ಪ್ರೇಮಾನಂದ ಮಹಾರಾಜ್ ದಂಪತಿಗೆ ಹೇಳಿದ್ದಾರೆ.
ಈ ವರ್ಷ ದಂಪತಿ ವೃಂದಾವನಕ್ಕೆ ನೀಡುತ್ತಿರುವುದು ಮೂರನೇ ಬಾರಿ. ದಂಪತಿ ಕಳೆದ ವಾರ ಯುಕೆಯಿಂದ ಭಾರತಕ್ಕೆ ಮರಳಿದರು. ಕಳೆದ ಜನವರಿಯಲ್ಲಿ, ವಿರಾಟ್, ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳು ಪ್ರೇಮಾನಂದ್ ಜಿ ಮಹಾರಾಜರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಒಂದು ದಿನದ ನಂತರ, ದಂಪತಿ ಪ್ರೇಮಾನಂದ್ ಜಿ ಮಹಾರಾಜ್ ಅವರಿಂದ ಆಶೀರ್ವಾದ ಪಡೆದರು.
ಕೊಹ್ಲಿ ಏಕದಿನ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸಕ್ರಿಯರಾಗಿದ್ದಾರೆ. ಡಿಸೆಂಬರ್ 24 ರಿಂದ ಪ್ರಾರಂಭವಾಗುವ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ಅವರು ಮೂರು ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 6 ರಂದು ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ ನಂತರ 37 ವರ್ಷದ ಆಟಗಾರ ಯುಕೆಗೆ ಹಿಂತಿರುಗಿದರು. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಕ್ಕಳಾದ ವಮಿಕಾ ಮತ್ತು ಅಕಾಯ್ ಜೊತೆಗೆ ಯುಕೆಯಲ್ಲಿ ವಾಸಿಸುತ್ತಿದ್ದಾರೆ.
ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಕೊಹ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿರುವುದರಿಂದ, ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ಕೆಲವೇ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.
Advertisement