

ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರಿಮಿಯರ್ ಲೀಗ್ (IPL) ಹರಾಜಿನಲ್ಲಿ ಕೋಟಿ ಕೋಟಿ ರೂಪಾಯಿ ಕೊಟ್ಟು ವಿದೇಶಿ ಆಟಗಾರರನ್ನು ಖರೀದಿಸಲಾಗುತ್ತಿದೆ. ಈ ಮಧ್ಯೆ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) 9.2 ಕೋಟಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಸೌಹಾರ್ದತೆ ಅಂತೇಳಿ ನಾವು ಕೋಟಿಗಟ್ಟಲೆ ಹಣ ಕೊಟ್ಟು ಬಾಂಗ್ಲಾದೇಶದ ಆಟಗಾರರನ್ನು ಐಪಿಎಲ್ ಗಾಗಿ ಖರೀದಿಸುತ್ತಿದ್ದರೆ ಅತ್ತ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಢಾಕಾದಲ್ಲಿ ಇಂದು ಭಾರತದ ವಿರುದ್ಧ ಪ್ರತಿಭಟನೆ ನಡೆಸಿ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಭಾರತ ಢಾಕಾದಲ್ಲಿರುವ ವೀಸಾ ಕೇಂದ್ರವನ್ನು ಮುಚ್ಚಿದ್ದರೆ ಭಾರತೀಯ ರಾಯಭಾರಿ ಕಚೇರಿಗೆ ಬೀಗಿ ಭದ್ರತೆ ಕಲ್ಪಿಸುವಂತೆ ಬಾಂಗ್ಲಾದೇಶಕ್ಕೆ ಆಗ್ರಹಿಸಿದೆ.
ಈ ಘಟನೆಗಳ ನಂತರ ನೆಟ್ಟಿಗರು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಇಲ್ಲಿ ಬಾಂಗ್ಲಾ ಆಟಗಾರರಿಗೆ ರೆಡ್ ಕಾರ್ಪೆಟ್ ಹಾಕಿ ಖರೀದಿಸುತ್ತಿದ್ದೀರಾ... ಇದೇನಾ ನಿಮ್ಮ ದೇಶಭಕ್ತಿ... ಎಂದು ಪ್ರಶ್ನಿಸುತ್ತಿದ್ದಾರೆ.
ಬಾಂಗ್ಲಾದೇಶದ ರಾಜಕೀಯ ರಾಷ್ಟ್ರೀಯ ನಾಗರಿಕ ಪಕ್ಷದ (NCP) ಮುಖ್ಯಸ್ಥ ಹಸ್ನತ್ ಅಬ್ದುಲ್ಲಾ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾನೆ. ಇತ್ತೀಚೆಗೆ ಗುಂಪೊಂದು ಭಾರತೀಯ ಹೈಕಮಿಷನರ್‌ಗೆ ಬೆದರಿಕೆ ಹಾಕಿದೆ. ಢಾಕಾದ ಕೇಂದ್ರ ಶಹೀದ್ ಮಿನಾರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಹಸ್ನತ್ ಅಬ್ದುಲ್ಲಾ, ಬಾಂಗ್ಲಾದೇಶವು ಪ್ರತ್ಯೇಕತಾವಾದಿ ಗುಂಪುಗಳು ಸೇರಿದಂತೆ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಬಹುದು. ಭಾರತದ 'ಸೆವೆನ್ ಸಿಸ್ಟರ್ಸ್' ಅಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಪ್ರತ್ಯೇಕಿಸುವ ಪ್ರಯತ್ನಗಳಿಗೆ ಸಹಾಯ ಮಾಡಬಹುದು ಎಂದು ಹೇಳಿದ್ದನು. ಈ ಹೇಳಿಕೆ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
Advertisement