

ನವದೆಹಲಿ: ಬಾಂಗ್ಲಾದೇಶದ ರಾಜಕೀಯ ರಾಷ್ಟ್ರೀಯ ನಾಗರಿಕ ಪಕ್ಷದ (NCP) ಮುಖ್ಯಸ್ಥ ಹಸ್ನತ್ ಅಬ್ದುಲ್ಲಾ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚೆಗೆ ಗುಂಪೊಂದು ಭಾರತೀಯ ಹೈಕಮಿಷನರ್‌ಗೆ ಬೆದರಿಕೆ ಹಾಕಿದೆ ಎಂಬ ಆರೋಪದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ನವದೆಹಲಿಯು ಬಲವಾದ ಪ್ರತಿಭಟನೆಯನ್ನು ದಾಖಲಿಸಲು ಡೀಮಾರ್ಚ್ ಆದೇಶವನ್ನು ಹೊರಡಿಸಿದೆ. ಏತನ್ಮಧ್ಯೆ, ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರವನ್ನು ಇಂದು ಬೆಳಗ್ಗೆಯಿಂದ ಮುಚ್ಚಲಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಕುರಿತು ಉಗ್ರಗಾಮಿ ಅಂಶಗಳು ಹರಡುತ್ತಿರುವ ಸುಳ್ಳು ನಿರೂಪಣೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಮಧ್ಯಂತರ ಸರ್ಕಾರವು ಈ ಘಟನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಯಾವುದೇ ಅರ್ಥಪೂರ್ಣ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂಬುದು ದುರದೃಷ್ಟಕರ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಢಾಕಾದ ಕೇಂದ್ರ ಶಹೀದ್ ಮಿನಾರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಹಸ್ನತ್ ಅಬ್ದುಲ್ಲಾ, ಬಾಂಗ್ಲಾದೇಶವು ಪ್ರತ್ಯೇಕತಾವಾದಿ ಗುಂಪುಗಳು ಸೇರಿದಂತೆ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಬಹುದು. ಭಾರತದ 'ಸೆವೆನ್ ಸಿಸ್ಟರ್ಸ್' ಅಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಪ್ರತ್ಯೇಕಿಸುವ ಪ್ರಯತ್ನಗಳಿಗೆ ಸಹಾಯ ಮಾಡಬಹುದು ಎಂದು ಹೇಳಿದ್ದರು.
ನಾವು ಪ್ರತ್ಯೇಕತಾವಾದಿ ಮತ್ತು ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡುತ್ತೇವೆ ಮತ್ತು ನಂತರ ನಾವು ಸೆವೆನ್ ಸಿಸ್ಟರ್ಸ್ ಅನ್ನು ಭಾರತದಿಂದ ಬೇರ್ಪಡಿಸುತ್ತೇವೆ. ಬಾಂಗ್ಲಾದೇಶದ ಸಾರ್ವಭೌಮತ್ವ, ಸಾಮರ್ಥ್ಯ, ಮತದಾನದ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಗೌರವಿಸದ ಗುಂಪುಗಳಿಗೆ ನೀವು ಆಶ್ರಯ ನೀಡಿದರೆ, ಬಾಂಗ್ಲಾದೇಶ ಪ್ರತಿಕ್ರಿಯಿಸುತ್ತದೆ ಎಂದು ನಾನು ಭಾರತಕ್ಕೆ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು.
ಈ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತೀವ್ರವಾಗಿ ಟೀಕಿಸಿದ್ದಾರೆ. ಬೇಜವಾಬ್ದಾರಿ ಮತ್ತು ಅಪಾಯಕಾರಿ ಎಂದು ಕರೆದಿದ್ದು ಭಾರತವು ಒಂದು ದೊಡ್ಡ ದೇಶ, ಪರಮಾಣು ಶಕ್ತಿ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೂ ಬಾಂಗ್ಲಾದೇಶ ಈ ರೀತಿ ಹೇಗೆ ಯೋಚಿಸಬಹುದು?
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಈ ಹಿಂದೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಈಶಾನ್ಯವು ಲಾಕ್ ಲ್ಯಾಂಡ್ ಪ್ರದೇಶವಾಗಿದೆ ಎಂದು ಅವರು ಹೇಳಿದ್ದರು. ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತದ ಕೆಲವು ಪ್ರದೇಶಗಳ ಮೇಲೆ ಚೀನಾದ ಪ್ರಭಾವವನ್ನು ಹೆಚ್ಚಿಸುವಂತೆ ಕರೆ ನೀಡಿದ್ದರು. ಇದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸಲಾಯಿತು.
Advertisement