

ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಇದೀಗ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಮಹಿಳಾ ಟಿ20ಐನಲ್ಲಿ 4000 ರನ್ ಗಳಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾರತದ ಉಪನಾಯಕಿ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್‌ನ ಸುಜೀ ಬೇಟ್ಸ್ ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಆಟಗಾರ್ತಿಯಾಗಿದ್ದು, ಮಂಧಾನಾ ಕೂಡ ಈಗ ಅವರ ಜೊತೆ ಸೇರಿದ್ದಾರೆ.
ಭಾರತದ ಆರಂಭಿಕ ಆಟಗಾರ್ತಿಯಾದ ಸ್ಮೃತಿ, ಬೇಟ್ಸ್ ಅವರನ್ನು ಹಿಂದಿಕ್ಕಿ ವೇಗವಾಗಿ 4000 ರನ್ ಪೂರೈಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಿವೀಸ್ ಆರಂಭಿಕ ಆಟಗಾರ್ತಿ 3675 ಎಸೆತಗಳಲ್ಲಿ 4000 ರನ್ ಪೂರೈಸಿದ್ದರೆ, 3227 ಎಸೆತಗಳಲ್ಲಿಯೇ ಈ ಸಾಧನೆ ಮಾಡಿದ್ದಾರೆ.
ಮಹಿಳಾ ಟಿ20ಗಳಲ್ಲಿ ಅತಿಹೆಚ್ಚು ರನ್ ಗಳಿಸಿದವರು
* ಸುಜಿ ಬೇಟ್ಸ್ 2007 ರಿಂದ 2025ರವರೆಗೆ 174 ಇನಿಂಗ್ಸ್‌ಗಳಲ್ಲಿ 4716 ರನ್ ಗಳಿಸಿದ್ದಾರೆ.
* ಸ್ಮೃತಿ ಮಂಧಾನ 2013 ರಿಂದ 2025ರವರೆಗೆ 148 ಇನಿಂಗ್ಸ್‌ಗಳಲ್ಲಿ 4007 ರನ್ ಗಳಿಸಿದ್ದಾರೆ.
* ಹರ್ಮನ್ ಪ್ರೀತ್ ಕೌರ್ 2009 ರಿಂದ 2025ರವರೆಗೆ 163 ಇನಿಂಗ್ಸ್‌ಗಳಲ್ಲಿ 3657 ರನ್ ಗಳಿಸಿದ್ದಾರೆ.
* ಚಮಾರಿ ಅತಪತ್ತು 2009 ರಿಂದ 2025ರವರೆಗೆ 144 ಇನಿಂಗ್ಸ್‌ಗಳಲ್ಲಿ 3473 ರನ್ ಗಳಿಸಿದ್ದಾರೆ.
* ಸೋಫಿ ಡಿವೈನ್ 2006 ರಿಂದ 2025ರವರೆಗೆ 142 ಇನಿಂಗ್ಸ್‌ಗಳಲ್ಲಿ 3431 ರನ್ ಗಳಿಸಿದ್ದಾರೆ.
ಭಾರತ vs ಶ್ರೀಲಂಕಾ ಮೊದಲ ಟಿ20ಐನಲ್ಲಿ ಕೇವಲ 122 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಂಧಾನ, ಪವರ್‌ಪ್ಲೇನ ಕೊನೆಯ ಓವರ್‌ನಲ್ಲಿ ಸಿಂಗಲ್ ಮೂಲಕ ಈ ಮೈಲಿಗಲ್ಲು ತಲುಪಿದರು. ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸ್ಮೃತಿ, ಕಳೆದ ತಿಂಗಳಷ್ಟೇ ನಡೆದ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ ಭಾರತದ ಪ್ರಶಸ್ತಿ ಗೆಲುವಿನ ಓಟದ ಭಾಗವಾಗಿದ್ದರು.
ದಾಖಲೆಯನ್ನು ಮುರಿದರೂ, ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಸ್ಮೃತಿ ಮಂಧಾನ ಎಡವಿದರು. ಅವರು 25 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶೆಫಾಲಿ ವರ್ಮಾ ಕೂಡ 9 ರನ್ ಔಟಾದರು. ನಂತರ ಬಂದ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 44 ಎಸೆತಗಳಲ್ಲಿ 69 ರನ್ ಗಳಿಸಿದ ಜೆಮಿಮಾ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.
Advertisement