

ಗಾಯಗೊಂಡು ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಅನುಮತಿ ನೀಡಲಾಗಿದೆ. ಭಾರತದ ಏಕದಿನ ತಂಡದ ಉಪನಾಯಕ ಡಿಸೆಂಬರ್ 25 ರಂದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಅವರು ಫಿಟ್ನೆಸ್ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಡಿಸೆಂಬರ್ 30 ರವರೆಗೆ ಬೆಂಗಳೂರಿನಲ್ಲಿಯೇ ಇರುತ್ತಾರೆ ಮತ್ತು ನಂತರ ಹೊರಡುತ್ತಾರೆ ಎನ್ನಲಾಗಿದೆ.
ಏಕದಿನ ತಂಡಕ್ಕೆ ಮರಳುವ ಮೊದಲು, ಶ್ರೇಯಸ್ 2025-26ರ ಎರಡು ವಿಜಯ್ ಹಜಾರೆ ಟ್ರೋಫಿ (ವಿಎಚ್‌ಟಿ) ಪಂದ್ಯಗಳಲ್ಲಿ ಆಡಲಿದ್ದಾರೆ. 31 ವರ್ಷದ ಆಟಗಾರ ಜನವರಿ 2 ರಂದು ಜೈಪುರದಲ್ಲಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಐದನೇ ಮತ್ತು ಆರನೇ ಗುಂಪು ಹಂತದ ಪಂದ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜನವರಿ 3 ರಂದು ಮಹಾರಾಷ್ಟ್ರ ವಿರುದ್ಧ ಮತ್ತು ಜನವರಿ 6 ರಂದು ಹಿಮಾಚಲ ಪ್ರದೇಶ ವಿರುದ್ಧ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.
ಜನವರಿ 8 ರಂದು ಪಂಜಾಬ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಿಂದ ಹೊರನಡೆಯುವ ಶ್ರೇಯಸ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಕೆಲವು ದಿನಗಳ ಹಿಂದೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. CoE ನಲ್ಲಿ ನೆಟ್ ಸೆಷನ್‌ನಲ್ಲಿ ಶ್ರೇಯಸ್ ರಕ್ಷಣಾತ್ಮಕ ಗೇರ್ ಧರಿಸಿರುವುದು ಕಂಡುಬಂದಿದೆ.
'ಶ್ರೇಯಸ್ ಬಗ್ಗೆ ನಮಗೆ ಸಕಾರಾತ್ಮಕ ಬೆಳವಣಿಗೆಗಳು ಕೇಳಿಬರುತ್ತಿವೆ. ಅವರು ಜನವರಿ 3 ಮತ್ತು ಜನವರಿ 6 ರಂದು ಮುಂಬೈ ಪರ ಎರಡು ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಅಂತಿಮ ವೇಳಾಪಟ್ಟಿ ಸಿಒಇಯ ಅನುಮತಿಯನ್ನು ಅವಲಂಬಿಸಿರುತ್ತದೆ. ಆದರೆ, ಜೈಪುರದಲ್ಲಿ ಆ ಪಂದ್ಯಗಳನ್ನು ಆಡಲು ಸಕಾರಾತ್ಮಕ ಚಿಹ್ನೆಗಳು ಇವೆ. ಅವರು ನೆಟ್ಸ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಯಾವುದೇ ಅಸ್ವಸ್ಥತೆ ಇಲ್ಲ' ಎಂದು ಎಂಸಿಎ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಕೊನೆಯ ಏಕದಿನ ಸರಣಿಯಿಂದ ಶ್ರೇಯಸ್ ಹೊರಗುಳಿದಿದ್ದರು. ಅವರ ಬದಲಿಗೆ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದರು. ಜನವರಿ 3 ಅಥವಾ 4 ರಂದು ಬಿಸಿಸಿಐ ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತದ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಶ್ರೇಯಸ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಅವರ ಆಯ್ಕೆಯಿಂದಾಗಿ ತಿಲಕ್ ವರ್ಮಾಗೆ ತಂಡದಿಂದ ಅವಕಾಶ ಕೈತಪ್ಪುವ ಸಾಧ್ಯತೆ ಇದೆ.
ಶುಭಮನ್ ಗಿಲ್ ಕೂಡ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಶ್ರೇಯಸ್ ಅವರಂತೆಯೇ ಅವರು ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.
Advertisement