
ಪುಣೆ: ನಿನ್ನೆ ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಭಾರತ ತಂಡ ಕೈಗೊಂಡ ನಿರ್ಧಾರ ಕಾರಣ ಎಂದು ಹೇಳಲಾಗುತ್ತಿದೆ.
ಹೌದು..ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ಗಳಲ್ಲಿ 181 ರನ್ ಕಲೆಹಾಕಿತು. ಭಾರತದ ಪರ ಅಭಿಷೇಕ್ ವರ್ಮಾ 29ರನ್, ರಿಂಕು ಸಿಂಗ್ 30 ರನ್, ಶಿವಂ ದುಬೆ 53 ಮತ್ತು ಹಾರ್ದಿಕ್ ಪಾಂಡ್ಯ 53ರನ್ ಕಲೆ ಹಾಕಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾದರು.
ಭಾರತ ನೀಡಿದ ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 19.4 ಓವರ್ಗಳಲ್ಲಿ 166 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 15 ರನ್ಗಳ ಗೆಲುವು ಸಾಧಿಸಿತು.
ಬದಲಿ ಆಟಗಾರನಾಗಿ ಬಂದು ಆಂಗ್ಲರ ಗೆಲುವು ಕಸಿದ ಹರ್ಷಿತ್ ರಾಣಾ
ಇನ್ನು ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಹರ್ಷಿತ್ ರಾಣಾ ಪ್ರಮುಖ ಪಾತ್ರವಹಿಸಿದರು. ಅಚ್ಚರಿ ಎಂದರೆ ಈ ಪಂದ್ಯಕ್ಕೆ ಹರ್ಷಿತ್ ರಾಣಾರನ್ನು ಆಯ್ಕೆ ಮಾಡಿಯೇ ಇರಲಿಲ್ಲ. ಬ್ಯಾಟಿಂಗ್ ವೇಳೆ ಶಿವಂ ದುಬೆ ಗಾಯಗೊಂಡಿದ್ದರು. ಅವರಿಗೆ ಬದಲಿ ಆಟಗಾರನಾಗಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಬದಲಿ ಆಟಗಾರನಾಗಿ ಬಂದ ಹರ್ಷಿತ್ ಆಂಗ್ಲರ ಗೆಲುವ ಕುಸಿದರು.
ಆಂಗ್ಲರ ಆಕ್ರೋಶ
ಇನ್ನು ಹರ್ಷಿತ್ ರಾಣಾರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಪಂದ್ಯದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ತನ್ನ ಅಸಮಾಧಾನ ಹೊರಹಾಕಿದೆ. ಬ್ಯಾಟಿಂಗ್ ವೇಳೆ ಶಿವಂ ದುಬೆ ಅವರ ಹೆಲ್ಮೆಟ್ಗೆ ಚೆಂಡು ಬಡಿದಿದ್ದರಿಂದ ಅವರು ಫೀಲ್ಡಿಂಗ್ಗೆ ಇಳಿದಿರಲಿಲ್ಲ. ಅವರ ಬದಲಿಗೆ ಹರ್ಷಿತ್ ರಾಣಾ ಕಣಕ್ಕಿಳಿದಿದ್ದರು. ಇದು ಇಂಗ್ಲೆಂಡ್ ತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಓರ್ವ ಪರಿಪೂರ್ಣ ಬ್ಯಾಟರ್ ಗೆ ಬದಲಿಯಾಗಿ ಓರ್ವ ಪರಿಪೂರ್ಣ ಬೌಲರ್ ನನ್ನು ಕಣಕ್ಕಿಳಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಐಸಿಸಿ ನಿಯಮವೇನು?
ಐಸಿಸಿ ನಿಯಮದ ಪ್ರಕಾರ, ಯಾವುದಾದರೂ ಆಟಗಾರ ಗಾಯಗೊಂಡರೆ, ಅಥವಾ ಇನ್ನಿತರೆ ಕಾರಣಗಳಿಂದ ಕಣಕ್ಕಿಳಿಯಲು ಅಸಾಧ್ಯವಾದರೆ ಅವರ ಬದಲಿಯಾಗಿ ಮತ್ತೋರ್ವನನ್ನು ಕಣಕ್ಕಿಳಿಸಬಹುದು. ಆದರೆ ಈ ನಿಯಮದ ಪ್ರಕಾರ, ಓರ್ವ ಬ್ಯಾಟರ್ ಬದಲಿಗೆ ಓರ್ವ ಬ್ಯಾಟರ್ ಮಾತ್ರ ಕಣಕ್ಕಿಳಿಯಬೇಕು. ಅಂತೆಯೇ ಓರ್ವ ಬೌಲರ್ ಬದಲಿಗೆ ಬೌಲರ್ ಮಾತ್ರ.. ಅಂತೆಯೇ ಓರ್ವ ಆಲ್ ರೌಂಡರ್ ಬದಲಿಗೆ ಆಲ್ರೌಂಡರ್ ಮಾತ್ರ ಕಣಕ್ಕಿಳಿಯಬೇಕು. ಇಲ್ಲಿ ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಇಬ್ಬರೂ ಆಲ್ರೌಂಡರ್ ಗಳಾಗಿದ್ದು, ಆದರೆ ಇಲ್ಲಿ ದುಬೆ ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದರೆ, ಹರ್ಷಿತ್ ರಾಣಾ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ. ಇದೇ ಅಂಶ ಇಂಗ್ಲೆಂಡ್ ತಂಡದ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.
ರಾಣಾ ಭರ್ಜರಿ ಬೌಲಿಂಗ್
ಟೀಮ್ ಇಂಡಿಯಾ ಹರ್ಷಿತ್ ರಾಣಾ ಅವರನ್ನು ಶಿವಂ ದುಬೆ ಅವರ ಕನ್ಕ್ಯುಶನ್ ಬದಲಿಯಾಗಿ ಕಣಕ್ಕಿಳಿಸಿತ್ತು. ಹೀಗೆ ಚೊಚ್ಚಲ ಟಿ20 ಪಂದ್ಯವಾಡಿದ ಹರ್ಷಿತ್ ಭರ್ಜರಿ ಬೌಲಿಂಗ್ ದಾಳಿ ನಡೆಸಿದರು. ತಾವೆಸೆದ ಮೊದಲ ಓವರ್ನಲ್ಲಿ ಕೇವಲ 5 ರನ್ ನೀಡಿದ ಹರ್ಷಿತ್ ರಾಣಾ ಇಂಗ್ಲೆಂಡ್ ನ ಲಿಯಾಮ್ ಲಿವಿಂಗ್ಸ್ಟೋನ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ತಮ್ಮ 2ನೇ ಓವರ್ನಲ್ಲಿ 18 ರನ್ ಚಚ್ಚಿಸಿಕೊಂಡರೂ, ಮೂರನೇ ಓವರ್ನಲ್ಲಿ ಹರ್ಷಿತ್ ನೀಡಿದ್ದು ಕೇವಲ 4 ರನ್ ಮಾತ್ರ. ಅಲ್ಲದೆ ಜೇಕಬ್ ಬೆಥೆಲ್ (6) ವಿಕೆಟ್ ಪಡೆದರು. 19ನೇ ಓವರ್ನಲ್ಲಿ ಕೇವಲ 6 ರನ್ ನೀಡಿ ಜೇಮಿ ಓವರ್ಟನ್ (19) ವಿಕೆಟ್ ಕಬಳಿಸಿದರು. ಈ ಮೂಲಕ 4 ಓವರ್ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು.
ಹೀಗೆ ಬದಲಿ ಆಟಗಾರನಾಗಿ ಬಂದು 3 ವಿಕೆಟ್ ಕಬಳಿಸಿದ್ದಲ್ಲದೇ ನಿರ್ಣಾಯಕ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿ ಹರ್ಷಿತ್ ರಾಣಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಈ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Advertisement