
ಮುಂಬೈ: ಮುಂಬರುವ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯ ಗೆಲ್ಲುವುದು ಮಾತ್ರ ನಮ್ಮ ಮುಂದಿಲ್ಲ. ಟ್ರೋಫಿ ಗೆಲ್ಲುವುದು ಮುಖ್ಯವಾಗಿದೆ ಹೊರತು ಕೇವಲ ಒಂದು ನಿರ್ದಿಷ್ಟ ಪಂದ್ಯವಲ್ಲ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಫೆಬ್ರುವರಿ 23 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಈ ಪಂದ್ಯದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದು, ನಾಕೌಟ್ ಹಂತಗಳಿಗೆ ಅರ್ಹತೆ ಪಡೆಯಲು ಎರಡೂ ತಂಡಗಳು ಗೆಲ್ಲಲೇಬೇಕಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿವೆ ಎಂಬುದನ್ನು ಗಂಭೀರ್ ಒಪ್ಪಿಕೊಂಡರೂ, 2002 ಮತ್ತು 2013 ರಲ್ಲಿನ ವಿಜಯಗಳ ನಂತರ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವ ಭಾರತದ ಪ್ರಯಾಣದಲ್ಲಿ ದುಬೈನಲ್ಲಿ ನಡೆಯುವ ಘರ್ಷಣೆಯು ಕೇವಲ ಒಂದು ಹೆಜ್ಜೆಯಷ್ಟೇ ಎಂದಿದ್ದಾರೆ.
'ನೋಡಿ, ನಾವು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ 23ನೇ ಪಂದ್ಯ ಮಾತ್ರ ನಮಗೆ ಪ್ರಮುಖ ಎಂದು ಭಾವಿಸುವುದಿಲ್ಲ. ಐದು ಪಂದ್ಯಗಳು, ಎಲ್ಲಾ ಆಟಗಳು ಮುಖ್ಯವೆಂದು ನಾನು ಭಾವಿಸುತ್ತೇನೆ' ಎಂದು ಗಂಭೀರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಕ್ರಮದಲ್ಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ದುಬೈಗೆ ಹೋಗುವ ಧ್ಯೇಯವೆಂದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದಾಗಿದೆ ಹೊರತು ಕೇವಲ ಒಂದು ನಿರ್ದಿಷ್ಟ ಪಂದ್ಯವನ್ನು ಗೆಲ್ಲುವುದು ಮಾತ್ರವಲ್ಲ. ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಚಾರದಲ್ಲಿ ಈ ಪಂದ್ಯವನ್ನು ನಾವು ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಲು ಪ್ರಯತ್ನಿಸುತ್ತೇವೆ. ಮುಖ್ಯವಾಗಿ, ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ವಿರುದ್ಧ ಆಡಿದಾಗ ಭಾವನೆಗಳು ನಿಜವಾಗಿಯೂ ಹೆಚ್ಚಿರುತ್ತವೆ. ಆದರೆ, ಅಂತಿಮವಾಗಿ ಸ್ಪರ್ಧೆಯು ಒಂದೇ ಆಗಿರುತ್ತದೆ' ಎಂದು ಅವರು ಹೇಳಿದರು.
ಈ ವರ್ಷದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ಎಂಟು ತಂಡಗಳು ಸ್ಪರ್ಧಿಸಲಿದ್ದು, ಭಾರತ ಮತ್ತು ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಮಾತ್ರ ನಾಕೌಟ್ ಹಂತಕ್ಕೆ ಹೋಗುತ್ತವೆ.
'50-ಓವರ್‌ಗಳ ವಿಶ್ವಕಪ್‌ಗೆ ಹೋಲಿಸಿದರೆ ಚಾಂಪಿಯನ್ಸ್ ಟ್ರೋಫಿ ಸಂಪೂರ್ಣವಾಗಿ ವಿಭಿನ್ನ ಸವಾಲಾಗಿದೆ. ಏಕೆಂದರೆ, ಪ್ರತಿಯೊಂದು ಪಂದ್ಯವು ಮಾಡು ಇಲ್ಲವೇ ಮಡಿ ಆಗಿರುತ್ತದೆ. ಆದ್ದರಿಂದ ನೀವು ಈ ಪಂದ್ಯಾವಳಿಯಲ್ಲಿ ಯಾವುದನ್ನೂ ಕೈಬಿಡಲು ಸಾಧ್ಯವಿಲ್ಲ. ಟ್ರೋಫಿಯನ್ನು ಗೆಲ್ಲಲು ಬಯಸಿದರೆ ಐದು ಪಂದ್ಯಗಳಲ್ಲಿಯೂ ಗೆಲ್ಲಬೇಕು. ಹೀಗಾಗಿ ನಾವು ಉತ್ತಮವಾಗಿ ಪ್ರಾರಂಭಿಸಲಿದ್ದೇವೆ' ಎಂದರು.
ಪಂದ್ಯಾವಳಿಗೆ ಭಾರತವು ಅನುಭವಿ 15 ಆಟಗಾರರ ತಂಡವನ್ನು ಹೆಸರಿಸಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಯುವ ಪ್ರತಿಭೆಗಳಾದ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಅರ್ಶದೀಪ್ ಸಿಂಗ್ ಇದ್ದಾರೆ.
ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಭಾರತಕ್ಕೆ ತಂಡದ ಸಂಪೂರ್ಣ ಕೊಡುಗೆ ಬೇಕಿರುತ್ತದೆ. 2013ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್‌ನಲ್ಲಿ ಗೆದ್ದ ಭಾರತದ ಚಾಂಪಿಯನ್ಸ್ ಟ್ರೋಫಿ ತಂಡದ ಮೂವರು ಆಟಗಾರರ ಪೈಕಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಈ ಜೋಡಿ ಮತ್ತೊಮ್ಮೆ ಪರಿಸ್ಥಿತಿಗೆ ತಕ್ಕ ಆಟ ಆಡಬಹುದು ಎಂದು ಗಂಭೀರ್ ತಿಳಿಸಿದ್ದಾರೆ.
'ರೋಹಿತ್ ಮತ್ತು ವಿರಾಟ್ ಇಬ್ಬರೂ ಡ್ರೆಸ್ಸಿಂಗ್ ರೂಮ್‌ಗೆ ತುಂಬಾ ಮೌಲ್ಯವನ್ನು ಸೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ಕ್ರಿಕೆಟ್‌ಗೆ ತುಂಬಾ ಮೌಲ್ಯವನ್ನು ಸೇರಿಸುತ್ತಾರೆ. ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ. ನಾನು ಮೊದಲೇ ಹೇಳಿದ್ದೇನೆ, ಆ ವ್ಯಕ್ತಿಗಳು ತುಂಬಾ ಹಸಿದಿದ್ದಾರೆ. ಅವರು ದೇಶಕ್ಕಾಗಿ ಆಡಲು ಬಯಸುತ್ತಾರೆ. ಅವರು ದೇಶಕ್ಕಾಗಿ ಆಡುವ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಉತ್ಸಾಹವನ್ನು ಹೊಂದಿದ್ದಾರೆ' ಎಂದು ಹೇಳಿದರು.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರವಿಂದ್ರ ಜಡೇಜಾ, ರಿಷಬ್ ಪಂತ್ .
ಭಾರತದ ಗುಂಪು ಹಂತದ ಪಂದ್ಯಗಳು
ಫೆಬ್ರುವರಿ 20- ಭಾರತ ವಿರುದ್ಧ ಬಾಂಗ್ಲಾದೇಶ, ದುಬೈ.
ಫೆಬ್ರುವರಿ 23- ಭಾರತ ವಿರುದ್ಧ ಪಾಕಿಸ್ತಾನ, ದುಬೈ.
ಮಾರ್ಚ್ 2- ಭಾರತ ವಿರುದ್ಧ ನ್ಯೂಜಿಲೆಂಡ್, ದುಬೈ.
Advertisement