
ಚೆನ್ನೈ: ಭಾರತ ತಂಡ ಮಾಜಿ ಆಲ್ರೌಂಡರ್ ಆರ್ ಅಶ್ವಿನ್ ಹ್ಯಾಟ್ರಿಕ್ ಶತಕ ಸಿಡಿಸಿ ಸುದ್ದಿಯಾಗಿದ್ದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರುದ್ಧ ಆಕ್ರೋಶಗೊಂಡಿದ್ದು, 'ಹೀಗೇ ಆಡಿದ್ರೆ ಮತ್ತೆ ಟೀಂ ಇಂಡಿಯಾ ಬಸ್ ಮಿಸ್ ಮಾಡ್ಕೋತಾನೆ' ಎಚ್ಚರಿಕೆ ನೀಡಿದ್ದಾರೆ.
ಹೌದು.. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಿದ್ದು, ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ತಂಡದ ಬಹುತೇಕ ಆಟಗಾರರು ತಮ್ಮ ಫಾರ್ಮ್ ಮುಂದವೆರೆಸಿದ್ದು ಆದರೆ ಈ ಹಿಂದೆ ಹ್ಯಾಟ್ರಿಕ್ ಶತಕ ಸಿಡಿಸಿದ್ದ ತಂಡದ ಸ್ಟಾರ್ ಬ್ಯಾಟರ್ ನಿಂದ ಮಾತ್ರ ಹೇಳಿಕೊಳ್ಳುವಂತಹ ಒಂದೂ ಪ್ರದರ್ಶನ ಮೂಡಿ ಬಂದಿಲ್ಲ. ಇದೇ ಕಾರಣಕ್ಕೆ ಅಶ್ವಿನ್ ಸ್ಟಾರ್ ಬ್ಯಾಟರ್ ವಿರುದ್ಧ ಕಿಡಿಕಾರಿದ್ದು ಮಾತ್ರವಲ್ಲದೇ ಹೀಗೇ ಮುಂದುವರೆದರೆ ತಂಡದ ಆಯ್ಕೆಯಿಂದ ದೂರ ಉಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಷ್ಟಕ್ಕೂ ಯಾರು ಆ ಬ್ಯಾಟರ್?
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳಲ್ಲಿ ಕೇವಲ 51 ರನ್ ಗಳಿಸಿ ಟೀಕೆಗೆ ಗುರಿಯಾಗಿರುವುದು ಬೇರಾರು ಅಲ್ಲ.. ಅದು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್.. ಈ ಹಿಂದೆ ಇದೇ ಸಂಜು ಸ್ಯಾಮ್ಸನ್ 2024ರ ಅಕ್ಟೋಬರ್-ನವೆಂಬರ್ ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟಿ20 ಸರಣಿಗಳಲ್ಲಿ ಸತತ ಮೂರು ಶತಕಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಅಲ್ಲದೆ ತಾವು ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗುವ ಮುನ್ಸೂಚನೆ ಕೂಡ ನೀಡಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 51 ರನ್‌ಗಳನ್ನು ಗಳಿಸಿ ನಿರಾಶೆ ಮೂಡಿಸಿದ್ದಾರೆ. ಇಡೀ ಸರಣಿಯಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅವರು ಗಳಿಸಿದ 26 ರನ್ ಗಳೇ ಅವರು ಸರಣಿಯಲ್ಲಿ ಕಲೆಹಾಕಿದ ವೈಯುಕ್ತಿಕ ಅತ್ಯಧಿಕ ಸ್ಕೋರ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅನಗತ್ಯ ಶಾಟ್ ಗಳಿಂದಾಗಿ ಔಟಾಗಿದ್ದು, ಇದು ಆರ್ ಅಶ್ವಿನ್ ಅವರ ಟೀಕೆಗೆ ಕಾರಣವಾಗಿದೆ. ಟೀಂ ಇಂಡಿಯಾದ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರ್ ಅಶ್ವಿನ್, ಸಂಜು ಸ್ಯಾಮ್ಸನ್ ರ ಇಂಗ್ಲೆಂಡ್ ಸರಣಿಯಲ್ಲಿನ ಶಾಟ್ ಸೆಲೆಕ್ಷನ್ ಗಳನ್ನು ಕಟುವಾಗಿ ಟೀಕಿಸಿದ್ದು, ಮಾತ್ರವಲ್ಲದೇ ಇದು ಹೀಗೆ ಮುಂದುವರೆದರೆ ಸಂಜು ಮತ್ತೆ ತಂಡದಿಂದ ದೂರಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
"ಒಬ್ಬ ಬ್ಯಾಟ್ಸ್‌ಮನ್ ಆಗಿ ಸಂಜು ಹೀಗೆ ಔಟಾಗುತ್ತಲೇ ಇದ್ದರೆ ಮನಸ್ಸು ತಂತ್ರಗಳನ್ನು ಆಡುತ್ತದೆ. ಬೌಲರ್ ಒಂದು ನಿರ್ದಿಷ್ಟ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾನೆ ಮತ್ತು ನಾನು ಈ ರೀತಿ ಪದೇ ಪದೇ ಔಟ್ ಆಗುತ್ತಿದ್ದೇನೆ, ಬೌಲರ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾನೆಯೇ ಅಥವಾ ನನ್ನಲ್ಲಿ ಏನಾದರೂ ನ್ಯೂನತೆ ಇದೆಯೇ? ನಾನು ಹೊಂದಿಕೊಳ್ಳಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿದರೆ, ಆಗ ಕಷ್ಟಕರವಾಗುತ್ತದೆ" ಎಂದು ಅಶ್ವಿನ್ ಹೇಳಿದ್ದಾರೆ.
"ಯಾಕೋ ಸಂಜು ಸ್ಯಾಮ್ಸನ್ ಮತ್ತೆ ಟೀಂ ಇಂಡಿಯಾ ಬಸ್ ಮಿಸ್ ಮಾಡಿಕೊಳ್ಳುವಂತೆ ತೋರುತ್ತಿದೆ. ಐದನೇ ಬಾರಿಗೆ, ಅದೇ ರೀತಿಯಲ್ಲಿ ಔಟ್ ಆಗುತ್ತಿದ್ದಾರೆ. ಅವರು ಇದೇ ರೀತಿಯ ಶಾಟ್ ಆಡಿದ್ದಾರೆ. ಪದೇ ಪದೇ ಒಂದೇ ರೀತಿಯಲ್ಲಿ ಔಟಾಗುತ್ತಿದ್ದು, ಆ ಎಸೆತವನ್ನು ತಮ್ಮ ಅಹಂಕಾರ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಪದೇ ಪದೇ 'ಇಲ್ಲ, ಇಲ್ಲ, ನಾನು ಈ ಶಾಟ್ ಆಡುತ್ತೇನೆ' ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ಅಹಂಕಾರ ಅವರಿಗೇ ಮುಳುವಾಗುತ್ತಿದೆ ಎಂದು ಕ್ರಿಸ್ ಶ್ರೀಕಾಂತ್ ಕೂಡ ಸಂಜು ಸ್ಯಾಮ್ಸನ್ ರನ್ನು ಟೀಕಿಸಿದ್ದಾರೆ.
ಒಂದೆಡೆ ಕಳಪೆ ಫಾರ್ಮ್, ಮತ್ತೊಂದೆಡೆ ಗಾಯ
ಇಂಗ್ಲೆಂಡ್ ವಿರುದ್ಧದ ಕಳಪೆ ಫಾರ್ಮ್ ಒಂದೆಡೆಯಾದರೆ ಇತ್ತ ಸಂಜು ಸ್ಯಾಮ್ಸನ್ ಗೆ ಗಾಯದ ಸಮಸ್ಯೆ ಕೂಡ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಸಂಜು ಬಲಗೈ ತೋರುಬೆರಳಿನ ಮೂಳೆ ಮುರಿತದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸಂಜು ಬರೊಬ್ಬರಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ.
ಇದು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗೆ ತಯಾರಿ ನಡೆಸಲು ಅವರಿಗೆ ಸಾಕಷ್ಟು ಸಮಯ ಇಲ್ಲದಂತೆ ಮಾಡಿದೆ. ಇತ್ತ ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಅನ್ನು ಪರಿಗಣಿಸಿ ಟೀಂ ಇಂಡಿಯಾ ಆಯ್ಕೆ ಸಮಿತಿ ಟಿ20 ತಂಡಕ್ಕೆ ಯಶಸ್ವಿ ಜೈಸ್ವಾಲ್ ರನ್ನು ಕರೆತರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇತ್ತ ವಿಕೆಟ್ ಕೀಪರ್ ಬ್ಯಾಟರ್ ಜಾಗದಲ್ಲಿ ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದ ಧ್ರುವ್ ಜುರೆಲ್ ಕೂಡ ಆಯ್ಕೆಯಾಗಬಹುದು. ಅಲ್ಲದೆ ಆಯ್ಕೆದಾರರು ಐಪಿಎಲ್ ನಂತರ ರಿಷಭ್ ಪಂತ್ ಅವರನ್ನು ಕೂಡ ತಂಡಕ್ಕೆ ತರಬಹುದು.
ಒಟ್ಟಾರೆ ಇಂಗ್ಲೆಂಡ್ ವಿರುದ್ದದ ಕಳಪೆ ಬ್ಯಾಟಿಂಗ್ ಮತ್ತು ಗಾಯದ ಸಮಸ್ಯೆ ಮತ್ತೆ ಸಂಜು ಸ್ಯಾಮ್ಸನ್ ರನ್ನು ತಂಡದ ದೂರ ಉಳಿಸುವ ಹಾಗೆ ಕಾಣುತ್ತಿದೆ.
Advertisement