IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು? ಬಿಗ್ ಅಪ್ಡೇಟ್ ನೀಡಿದ ಫ್ರ್ಯಾಂಚೈಸಿ
ಮಾರ್ಚ್ 21ರಂದು 2025ನೇ ಐಪಿಎಲ್ ಆವೃತ್ತಿ ಆರಂಭವಾಗಲಿದ್ದು, ಈಗಾಗಲೇ ಎಲ್ಲ ಪ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಿವೆ. ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ನಾಯಕ ಯಾರೆಂಬುದನ್ನು ಘೋಷಿಸಿದ್ದು, ಉಳಿದ ತಂಡಗಳು ಯಾರನ್ನು ನಾಯಕನನ್ನಾಗಿ ಮಾಡಲಿವೆ ಎನ್ನುವ ಕುತೂಹಲ ಸದ್ಯ ಮನೆಮಾಡಿದೆ. ಕಳೆದ ಬಾರಿ ನಡೆದ ಮೆಗಾ ಹರಾಜಿನಲ್ಲಿ ಬಹುತೇಕ ಎಲ್ಲ ತಂಡಗಳು ಉತ್ತಮ ಆಟಗಾರರರನ್ನು ತಂಡಕ್ಕೆ ಸೇರಿಸಿಕೊಂಡಿವೆ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡ ಬಲಿಷ್ಠ ತಂಡವನ್ನು ಕಟ್ಟಿದ್ದು, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಆರ್‌ಸಿಬಿ ಈ ಬಾರಿ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಮೂರು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ ಇದೀಗ ಆರ್‌ಸಿಬಿ ಜೊತೆಗಿಲ್ಲ. ಹೀಗಾಗಿ, ನಾಯಕ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಅನೇಕ ಅಭಿಮಾನಿಗಳು ಮತ್ತು ಕ್ರೀಡಾಸಕ್ತರು RCB ನಾಯಕತ್ವದಿಂದ ಕೆಳಗಿಳಿದಿದ್ದ ವಿರಾಟ್ ಕೊಹ್ಲಿ ಅವರನ್ನೇ ಈ ಆವೃತ್ತಿಯಲ್ಲಿ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲಿಗೆ ಆರ್‌ಸಿಬಿ ನಾಯಕನಾಗಿದ್ದ ಕೊಹ್ಲಿ 2021 ರಲ್ಲಿ ಆ ಜವಾಬ್ದಾರಿಯಿಂದ ಕೆಳಗಿಳಿದಿದ್ದರು. ಈವರೆಗೂ ಒಮ್ಮೆಯೂ ಪ್ರಶಸ್ತಿಯನ್ನ ಗೆದ್ದಿಲ್ಲದ ಆರ್‌ಸಿಬಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲಿ ಎಂಬುದು ಅಭಿಮಾನಿಗಳ ಹಾರೈಕೆ.
ಸ್ಪೋರ್ಟ್ಸ್ ಟಾಕ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಐಪಿಎಲ್‌ನ 2025ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಫ್ರಾಂಚೈಸಿಗೆ ನಾಯಕರಾಗುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್‌ಸಿಬಿಯ ಸಿಒಒ ರಾಜೇಶ್ ಮೆನನ್, 'ಸದ್ಯ ನಾವು ಈ ಬಗ್ಗೆ ನಿರ್ಧರಿಸಿಲ್ಲ. ನಮ್ಮ ತಂಡದಲ್ಲಿ ಈಗ ನಾಕರಾಗಲು ಅರ್ಹತೆ ಇರುವ ನಾಲ್ಕರಿಂದ ಐದು ಮಂದಿ ಇದ್ದಾರೆ. ನಾವು ಯಾರನ್ನು ನಾಯಕನನ್ನಾಗಿ ಮಾಡಬೇಕೆಂದು ನಾವು ಚರ್ಚಿಸಿಲ್ಲ. ಈ ಬಗ್ಗೆ ನಾವು ಚರ್ಚಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ತೀರ್ಮಾನಕ್ಕೆ ಬರುತ್ತೇವೆ' ಎಂದಿದ್ದಾರೆ.
ವಿರಾಟ್ ಕೊಹ್ಲಿ 2011 ರಿಂದ 2021ರವರೆಗೆ 143 ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದಾರೆ. ಅವುಗಳಲ್ಲಿ 66 ಪಂದ್ಯಗಳನ್ನು ಗೆದ್ದಿದ್ದಾರೆ. 2016ನೇ ಆವೃತ್ತಿಯಲ್ಲಿ ಆರ್‌ಸಿಬಿಯನ್ನು ಫೈನಲ್‌ಗೆ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಆ ಆವೃತ್ತಿಯಲ್ಲಿ ಅವರು 973 ರನ್ ಗಳಿಸಿದ್ದರು.
ಕಳೆದ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್‌ರನ್ನು ಮೆಗಾ ಹರಾಜಿಗೆ ಮುನ್ನ ತಂಡದಿಂದ ಕೈಬಿಡಲಾಗಿದ್ದು, ವಿರಾಟ್ ಕೊಹ್ಲಿ, ಯಶ್ ದಯಾಳ್ ಮತ್ತು ರಜತ್ ಪಾಟಿದಾರ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು. 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಜೋಶ್ ಹ್ಯಾಜಲ್‌ವುಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ ಮತ್ತು ಸುಯಾಶ್ ಶರ್ಮಾಸೇರಿದಂತೆ ಅನೇಕ ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
'ನಾವು ಯಾವ ರೀತಿಯ ಕೊರತೆಗಳನ್ನು ಹೊಂದಿದ್ದೇವೆ ಮತ್ತು ಅವುಗಳನ್ನು ಪೂರೈಸಲು ಯಾವ ರೀತಿಯ ತಂಡವನ್ನು ಕಟ್ಟಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಿದ್ದೇವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಏನು ಮಾಡಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಂಡು ಅದಕ್ಕೆ ತಕ್ಕಂತೆ ಆಟಗಾರರನ್ನು ಖರೀದಿ ಮಾಡಲಾಗಿದೆ. ನಮಗೆ ಬೇಕಾಗಿದ್ದಂತ ತಂಡವೇ ಸಿಕ್ಕಿದೆ' ಎಂದು ರಾಜೇಶ್ ಮೆನನ್ ಹೇಳಿದ್ದಾರೆ.
ಹರಾಜಿನ ಮೊದಲನೇ ದಿನ ಜನರು ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆಯಾಗಿತ್ತು. ಆದರೆ, ಎರಡನೇ ದಿನದ ಕೊನೆಯಲ್ಲಿ, ಅಭಿಮಾನಿಗಳಿಂದ ತಜ್ಞರವರೆಗೆ ಎಲ್ಲರೂ ನಾವು ಉತ್ತಮ ತಂಡವನ್ನು ಕಟ್ಟಿದ್ದೇವೆ ಎಂದು ಭಾವಿಸಿದರು. ಏಕೆಂದರೆ, ನಾವು ಎಲ್ಲಾ ರೀತಿಯ ಕೊರತೆಗಳನ್ನು ತುಂಬುವಂತ ಕೆಲಸ ಮಾಡಿದ್ದೇವೆ ಮತ್ತು ಅತ್ಯುತ್ತಮ ತಂಡಗಳಲ್ಲಿ ಒಂದನ್ನು ಕಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದರು.