
ನಾಗ್ಪುರ: ಭಾರತದ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದ ಇಂಗ್ಲೆಂಡ್ ತಂಡ ಹರ್ಷಿತ್ ರಾಣಾ ಮತ್ತು ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 248 ರನ್ ಗಳಿಗೆ ಆಲೌಟ್ ಆಗಿದೆ.
ಹೌದು.. ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಭಾರತದ ವೇಗಿ ಹರ್ಷಿತ್ ರಾಣಾ ಅದ್ಭುತ ಪ್ರದರ್ಶನ ನೀಡಿ ಮೂರು ಪ್ರಮುಖ ವಿಕೆಟ್ ಪಡೆದು ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. ಅವರಿಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿ ಅವರೂ ಕೂಡ 3 ವಿಕೆಟ್ ಪಡೆದು ಮಂಚಿದರು.
ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಮತ್ತು ಜೇಕಬ್ ಬೇಥಲ್ ಅವರ ಅರ್ಧಶತಕ ಮತ್ತು ಫಿಲಿಪ್ ಸಾಲ್ಟ್ ಮತ್ತು ಬೆನ್ ಡಕೆಟ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ 248 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಫಿಲಿಪ್ ಸಾಲ್ಟ್ (43 ರನ್) ಮತ್ತು ಬೆನ್ ಡಕೆಟ್ (32 ರನ್) ಮೊದಲ ವಿಕೆಟ್ ಗೆ 75 ರನ್ ಗಳ ಅಮೋಘ ಜೊತೆಾಟ ನೀಡಿದರು. ಈ ಹಂತದಲ್ಲಿ ಫಿಲಿಪ್ ಸಾಲ್ಟ್ ಅನಗತ್ಯ ರನ್ ಕದಿಯಲು ಹೋಗಿ ರನೌಟ್ ಗೆ ಬಲಿಯಾದರು. ಈ ಹೊತ್ತಿಗೆ ಇಂಗ್ಲೆಂಡ್ ತಂಡ ಅತ್ಯುತ್ತಮ ಸ್ಥಿತಿಯಲ್ಲಿತ್ತು.
ಬಳಿಕ ಕ್ರೀಸ್ ಗೆ ಬಂದ ಜೋ ರೂಟ್ 19 ರನ್ ಗಳಿಸಿ ಔಟಾದರೆ, ನಾಯಕ ಜಾಸ್ ಬಟ್ಲರ್ ಮತ್ತು ಜೇಕಬ್ ಬೇಥಲ್ ತಲಾ ಅರ್ಧಶತಕ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದರು. ಆದರೆ ಈ ಹಂತದಲ್ಲಿ ಭಾರತ ತಂಡದ ಬೌಲಿಂಗ್ ಫೀಲ್ಡಿಂಗ್ ನಲ್ಲಿ ಬದಲಾವಣೆ ತಂದ ಪರಿಣಾಮ ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಬಿದ್ದಿದ್ದು ಮಾತ್ರವಲ್ಲದೇ ವಿಕೆಟ್ ಗಳೂ ಒಂದರ ಹಿಂದೆ ಒಂದು ಉರುಳುತ್ತಾ ಸಾಗಿತು.
ಜಾಸ್ ಬಟ್ಲರ್ 52 ರನ್ ಗಳಿಸಿ ಔಟಾದರೆ ಅವರಿಗೆ ಉತ್ತಮ ಸಾಥ್ ನೀಡಿದ ಬೆಥೆಲ್ ಕೂಡ 51ರನ್ ಗಳಿಸಿ ಔಟಾದರು. ಆ ಬಳಿಕ ಮೈದಾನದಲ್ಲಿ ನಡೆದಿದ್ದು ಇಂಗ್ಲೆಂಡ್ ದಾಂಡಿಗರ ಪೆವಿಲಿಯನ್ ಪರೇಡ್.. ಅಂತಿಮವಾಗಿ ಇಂಗ್ಲೆಂಡ್ ತಂಡ 47.4 ಓವರ್ ನಲ್ಲಿ 248 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಹರ್ಷಿತ್ ರಾಣಾ ಮತ್ತು ರವೀಂದ್ರ ಜಡೇಡಾ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಶಮಿ, ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
Advertisement