
ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾಗೆ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಆಂಗ್ಲರ ವಿರುದ್ಧ ದಾಖಲೆಯ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಹೌದು.. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿರುವ 249ರನ್ ಗಳನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ನೆರವಾದರು. ನಾಗ್ಪುರ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ 36 ಎಸೆತಗಳಲ್ಲಿ 163.89 ಸ್ಟ್ರೈಕ್ ರೇಟ್‌ನಲ್ಲಿ 59 ರನ್ ಗಳಿಸಿ ಔಟಾದರು. ಅವರ ಈ ಭರ್ಜರಿ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು.
ದಾಖಲೆಯ ಅರ್ಧಶತಕ
ಇನ್ನು ಇದೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 2ನೇ ವೇಗದ ಅರ್ಧಶತಕ ಗಳಿಸಿದರು. ಈ ಹಿಂದೆ ಶ್ರೇಯಸ್ ಅಯ್ಯರ್ 2019ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಪಂದ್ಯದಲ್ಲಿ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಆ ಮೂಲಕ ಇಂದು ತಮ್ಮ 2ನೇ ವೇಗದ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದರು.
ಇನ್ನು ಈ ಪಂದ್ಯದಲ್ಲಿ ಭಾರತದ ಪರ ಅಕ್ಸರ್ ಪಟೇಲ್ ಕೂಡ ಅರ್ಧಶತಕ ಸಿಡಿಸಿ ಶ್ರೇಯಸ್ ಅಯ್ಯರ್ ಗೆ ಉತ್ತಮ ಸಾಥ್ ನೀಡಿದರು. ಅಕ್ಸರ್ ಪಟೇಲ್ ಒಟ್ಟು 47 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 110.64 ಸ್ಟ್ರೈಕ್ ರೇಟ್ ನಲ್ಲಿ 52 ರನ್ ಕಲೆಹಾಕಿದರು.
Advertisement