
ಕಟಕ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 304 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ ಗೆಲ್ಲಲು 305ರನ್ ಗಳ ಬೃಹತ್ ಗುರಿ ನೀಡಿದೆ.
ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 49.5 ಓವರ್ ನಲ್ಲಿ ಬೆನ್ ಡಕೆಟ್ (65 ರನ್), ಜೋ ರೂಟ್ (69 ರನ್) ಅರ್ಧಶತಕಗಳ ನೆರವಿನಿಂದ 304 ರನ್ ಗಳಿಸಿ ಆಲೌಟ್ ಆಯಿತು.
ಆರಂಭದಲ್ಲಿ ಉತ್ತಮ ಆರಂಭ ಪಡೆದ ಇಂಗ್ಲೆಂಡ್ ತನ್ನ ರನ್ ಗಳಿಕೆಯನ್ನು 330ರ ಗಡಿ ದಾಟಿಸುವ ಸಾಧ್ಯತೆ ಇತ್ತು. ಭಾರತದ ಪ್ರಮುಖ ವೇಗಿಗಳಾದ ಮಹಮದ್ ಶಮಿ (7.5 ಓವರ್, 66 ರನ್), ಹಾರ್ದಿಕ್ ಪಾಂಡ್ಯಾ (7 ಓವರ್, 53 ರನ್) ಮತ್ತು ಹರ್ಷಿತ್ ರಾಣಾ (9 ಓವರ್, 62 ರನ್) ದುಬಾರಿಯಾದರು.
ಆದರೆ ಸ್ಪಿನ್ನರ್ ರವೀಂದ್ರ ಜಡೇಜಾ ಟೈಟ್ ಬೌಲಿಂಗ್ ಮಾಡಿ ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಒಟ್ಟು 10 ಓವರ್ ಎಸೆದು 1 ಮೇಡಿನ್ ಮಾಡಿದ ಜಡೇಜಾ ಕೇವಲ 3.50 ಸರಾಸರಿಯಲ್ಲಿ 35 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಉಳಿದಂತೆ ಶಮಿ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯಾ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಇದೀಗ ಭಾರತ ತಂಡ ತನ್ನ ಪಾಲಿನ 50 ಓವರ್ ಗಳಲ್ಲಿ 305ರನ್ ಗಳಿಸಬೇಕಿದ್ದು, ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ದೂರ ಉಳಿದಿದ್ದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್ ಆಗಿದ್ದಾರೆಯಾದರೂ ಅವರ ಕಳಪೆ ಫಾರ್ಮ್ ತಲೆನೋವಾಗಿದೆ. ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುವ ಸಾಧ್ಯತೆ ಇದೆ.
Advertisement