
ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 11ನೇ ಸೀಸನ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು 4 ಬಾರಿ ಪಂದ್ಯಾವಳಿಯನ್ನು ಗೆದ್ದಿರುವ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡವು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ತಂಡವು 10 ಓವರ್‌ಗಳ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. CCL 2024ರ ಅಗ್ರ ಸ್ಕೋರರ್‌ಗಳಲ್ಲಿ ಒಬ್ಬರಾದ ಡಾರ್ಲಿಂಗ್ ಕೃಷ್ಣ ಕೇವಲ 39 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಿಡಿಸಿ ಅಜೇಯ 80 ರನ್ ಗಳಿಸಿದರು.
ಪವರ್ ಪ್ಲೇನ ಮೊದಲ ಮೂರು ಓವರ್‌ಗಳು ತಂಡಕ್ಕೆ ಉತ್ತಮವಾಗಿರಲಿಲ್ಲ. ರಾಜೀವ್ ಹನು ಮತ್ತು ಜೆ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೃಷ್ಣ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ತೆಲುಗು ವಾರಿಯರ್ಸ್ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತು. ನಾಯಕ ಅಖಿಲ್ ಅಕ್ಕಿನೇನಿ 31 ಎಸೆತಗಳಲ್ಲಿ 51 ರನ್ ಗಳಿಸಿದರೆ, ಉಳಿದ ಬ್ಯಾಟರ್‌ಗಳು ರನ್ ಗಳಿಸುವಲ್ಲಿ ವಿಫಲವಾದರು. ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಮಂಜುನಾಥ್ ಗೌಡ ಮತ್ತು ಚಂದನ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
14 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು. ಈ ಮೂಲಕ 137 ರನ್‌ಗಳ ಗುರಿ ನೀಡಿತು.
ಕರ್ನಾಟಕ ಬುಲ್ಡೋಜರ್ಸ್ ತಂಡ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನಟ್ಟಿದ ತೆಲುಗು ವಾರಿಯರ್ಸ್ ತಂಡ 10 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೋಲೊಪ್ಪಿಕೊಂಡಿತು. ಗೋಲ್ಡನ್ ಸ್ಟಾರ್ ಗಣೇಶ್ 4 ವಿಕೆಟ್ ಪಡೆದರು. ಚಂದನ್ ಕುಮಾರ್ ಮತ್ತು ಅನೂಪ್ ಭಂಡಾರಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
Advertisement