
ಕಟಕ್: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೆಲ ಕ್ಷಣಗಳ ನಾಯಕ ರೋಹಿತ್ ಶರ್ಮಾ ಸಂಯಮ ಕಳೆದುಕೊಂಡು ಆಕ್ರೋಶಗೊಂಡಿದ್ದ ಘಟನೆ ನಡೆದಿದೆ.
ಹೌದು.. ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೇಗಿದ ಹರ್ಷಿತ್ ರಾಣಾ ವಿರುದ್ದ ಆಕ್ರೋಶಗೊಂಡರು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 32 ನೇ ಓವರ್‌ನಲ್ಲಿ ಜೋಸ್ ಬಟ್ಲರ್‌ಗೆ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಆ ಓವರ್‌ನ ಐದನೇ ಎಸೆತದಲ್ಲಿ, ಬಟ್ಲರ್ ಹರ್ಷಿತ್ ರಾಣಾ ಎಸೆತವನ್ನು ಡಿಫೆಂಡ್ ಮಾಡಿಕೊಂಡರು. ಈ ವೇಳೆ ಅದನ್ನು ಕೈಗೆ ಪಡೆದ ಹರ್ಷಿತ್ ರಾಣಾ ಚೆಂಡನ್ನು ಎತ್ತಿಕೊಂಡು ಅನಗತ್ಯವಾಗಿ ಸ್ಟಂಪ್‌ಗಳತ್ತ ಎಸೆದರು. ಈ ವೇಳೆ ಚೆಂಡು ಕೆಎಲ್ ರಾಹುಲ್ ಅವರನ್ನೂ ದಾಟಿ ಬೌಂಡರಿಗೆ ಹೋಯಿತು.
ಇದರಿಂದ ಇಂಗ್ಲೆಂಡ್ ತಂಡ ನಿರಾಯಾಸವಾಗಿ ಹೆಚ್ಚುವರಿ 4ರನ್ ಪಡೆಯಿತು. ಈ ವೇಳೆ ಹರ್ಷಿತ್ ರಾಣಾ ವಿರುದ್ದ ನಾಯಕ ರೋಹಿತ್ ಶರ್ಮಾ ಗರಂ ಆಗಿ, 'ಏಯ್.. ರಾಣಾ ತಲೆ ಸರಿ ಇಲ್ವಾ.. ತಲೆ ಎಲ್ಲಿದೆ ಎಂದು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಅಂತೆಯೇ ಇದೇ ಪಂದ್ಯದಲ್ಲಿ ಭಾರತ ತಂಡ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿತು. ಪ್ರಮುಖವಾಗಿ ಭಾರತ ಬೌಲಿಂಗ್ ನಲ್ಲಿ ಡಿಆರ್ ಎಸ್ ಕಳೆದುಕೊಂಡಿತು. ಅನಗತ್ಯ ಎಸೆತಗಳಲ್ಲಿ ಡಿಆರ್ ಎಸ್ ಪಡೆದು ಅಗತ್ಯವಿದ್ದಾಗ ಗೊಂದಲದಿಂದಾಗಿ ಡಿಆರ್ ಎಸ್ ಪಡೆಯದೇ ಸಿಗಬಹುದಾಗಿದ್ದ ವಿಕೆಟ್ ಕೂಡ ಕೈ ಚೆಲ್ಲಿತು.
ಇದರಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಪಾತ್ರ ಕೂಡ ಇತ್ತು. ರಾಹುಲ್ ಡಿಆರ್ ಎಸ್ ವಿಚಾರದಲ್ಲಿ ತಲ್ಲೀನರಾಗಿರಲಿಲ್ಲ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಅವರು ಅಗತ್ಯ ಸಂದರ್ಭದಲ್ಲಿ ಆಸಕ್ತಿ ತೋರದೇ ಇದ್ದಿದ್ದು ಭಾರತಕ್ಕೆ ದುಬಾರಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement