
ಕಟಕ: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಫಾರ್ಮ್ ಗೆ ಮರಳಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ವಿಶ್ವದಾಖಲೆಯನ್ನೂ ಹಿಂದಿಕ್ಕಿದ್ದಾರೆ.
ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೇವಲ 76 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು. ಅಂತೆಯೇ ಇದು ರೋಹಿತ್ ಶರ್ಮಾ ಅವರ 32ನೇ ಏಕದಿನ ಶತಕವಾಗಿದೆ.
ಅಂತೆಯೇ ಈ ಶತಕದೊಂದಿಗೆ ರೋಹಿತ್ ಶರ್ಮಾ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದು ಮಾತ್ರವಲ್ಲದೇ ಈ ದಾಖಲೆ ಹೊಂದಿದ್ದ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ಸಚಿನ್ ಮಾತ್ರವಲ್ಲದೇ ರೋಹಿತ್ ಶ್ರೀಲಂಕಾದ ಬ್ಯಾಟಿಂಗ್ ದಂತಕಥೆಗಳಾದ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಗರಿಷ್ಠ ಶತಕ ಗಳಿಸಿದ 3ನೇ ಆಟಗಾರ
ಈ ಶತಕದ ಮೂಲಕ ರೋಹಿತ್ ಶರ್ಮಾ ತಮ್ಮ ಏಕದಿನ ಶತಕಗಳ ಸಂಖ್ಯೆಯನ್ನು 32ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ ಅತೀ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾ. ಈ ಪಟ್ಟಿಯಲ್ಲಿ ಸಚಿನ್ ಅಗ್ರಸ್ಥಾನಿಯಾಗಿದ್ದು, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
30ನೇ ವರ್ಷದ ಬಳಿಕ ಗರಿಷ್ಟ ಶತಕ ಸಿಡಿಸಿದ ಆಟಗಾರ
ಕಟಕ್ನಲ್ಲಿ ಮೂಡಿಬಂದಿರುವುದು ರೋಹಿತ್ ಶರ್ಮಾ ಅವರ 32ನೇ ಏಕದಿನ ಶತಕ. ಈ 32 ಶತಕಗಳಲ್ಲಿ 22 ಸೆಂಚುರಿಗಳು 30 ವರ್ಷಗಳ ಬಳಿಕ ಮೂಡಿಬಂದಿದೆ. ಅಂದರೆ ರೋಹಿತ್ ಶರ್ಮಾ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿದ ಬಳಿಕ ಬರೋಬ್ಬರಿ 22 ಏಕದಿನ ಸೆಂಚುರಿಗಳನ್ನು ಸಿಡಿಸಿದ್ದಾರೆ. ಕಳೆದ 7 ವರ್ಷಗಳಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಬಾರಿಸಿದ 22 ಶತಕಗಳು ಈಗ ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ಅಂದರೆ 30 ವರ್ಷದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಇದೀಗ ಹಿಟ್ಮ್ಯಾನ್ ಪಾಲಾಗಿದೆ.
ಜಯಸೂರ್ಯ, ದಿಲ್ಶಾನ್ ದಾಖಲೆಯೂ ಪತನ
ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಹೆಸರಿನಲ್ಲಿತ್ತು. ಲಂಕಾ ದಾಂಡಿಗರಿಬ್ಬರು 30 ವರ್ಷವಾದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ತಲಾ 21 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 22 ಶತಕಗಳನ್ನು ಸಿಡಿಸಿ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ರೋಹಿತ್ ಶರ್ಮಾ ಸಫಲರಾಗಿದ್ದಾರೆ. ಈ ಮೂಲಕ 37 ವರ್ಷದ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಅಂಚಿನಲ್ಲೂ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಧಿಕ ರನ್ ಕಲೆಹಾಕಿದ 4ನೇ ಆಟಗಾರ
ಇನ್ನು ಈ ಶತಕದೊಂದಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. 259 ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು 10987 ರನ್ ಬಾರಿಸಿ ಈ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಸಚಿನ್ 18426 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Advertisement