
ಅಹಮದಾಬಾದ್: ಬುಧವಾರ ಇಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತನ್ನ ಪ್ಲೇಯಿಂಗ್ XI ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಮೊಹಮ್ಮದ್ ಶಮಿ ಬದಲಿಗೆ ವೇಗಿ ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡ ಸೇರಿಕೊಂಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದು, ವರುಣ್ ಚಕ್ರವರ್ತಿ ಸದ್ಯ ತಂಡದಿಂದ ಹೊರಗುಳಿದಿದ್ದಾರೆ.
ಮತ್ತೊಂದೆಡೆ, ಟಾಮ್ ಬ್ಯಾಂಟನ್ ಇಂಗ್ಲೆಂಡ್‌ನ ಪ್ಲೇಯಿಂಗ್ ಇಲೆವೆನ್‌ಗೆ ಸೇರ್ಪಡೆಗೊಂಡಿದ್ದಾರೆ. ಟೀಂ ಇಂಡಿಯಾ ಈಗಾಗಲೇ 2-0 ಮುನ್ನಡೆಯೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದ್ದು, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಆಡುತ್ತಿದೆ. ಇತ್ತ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಾದರೂ ಗೆಲುವು ಕಾಣುವ ನಿರೀಕ್ಷೆಯಲ್ಲಿದೆ.
ಇತ್ತೀಚಿನ ಕೆಲವು ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡಿದ್ದ ನಾಯಕ ರೋಹಿತ್ ಶರ್ಮಾ ಇದೀಗ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದಾರೆ. ಕಟಕ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ, ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಎರಡನೇ ODIನಲ್ಲಿ ಅವರು 90 ಎಸೆತಗಳಲ್ಲಿ 119 ರನ್ ಗಳಿಸಿದ್ದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಫಾರ್ಮ್‌ಗೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ.
ಇದೀಗ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕೊಹ್ಲಿ, ಮೂರನೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸ ವ್ಯಕ್ತವಾಗಿದೆ. ರನ್ ಮಷಿನ್ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯನ್ನು ರಚಿಸುವ ಅವಕಾಶ ಹೊಂದಿದ್ದಾರೆ. ಈ ಸ್ವರೂಪದಲ್ಲಿ 14,000 ರನ್ ಗಳಿಸಿದ ಮೂರನೇ ಬ್ಯಾಟರ್ ಆಗಲು ಅವರಿಗೆ ಕೇವಲ 89 ರನ್ ಕೊರತೆ ಇದೆ.
ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷ್‌ದೀಪ್ ಸಿಂಗ್.
ಇಂಗ್ಲೆಂಡ್ ತಂಡ
ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಟಾಮ್ ಬ್ಯಾಂಟನ್, ಲಿಯಾಮ್ ಲಿವಿಂಗ್‌ಸ್ಟೋನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್.
Advertisement