
ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗೆ ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಮಂಗಳವಾರ ತಡರಾತ್ರಿ ಈ ವಿಚಾರವನ್ನು ಖಚಿತಪಡಿಸಿದೆ. ಬುಮ್ರಾ ಬದಲಿಗೆ ವೇಗಿ ಹರ್ಷಿತ್ ರಾಣಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬುಮ್ರಾ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇದೀಗ ಅನಿವಾರ್ಯವಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಮೊದಲು ಪ್ರಕಟಿಸಿದ್ದ ತಂಡದಲ್ಲಿ ಬುಮ್ರಾ ಅವರ ಹೆಸರಿತ್ತು.
ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಅವರ ಸ್ಥಾನಕ್ಕೆ 33 ವರ್ಷದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಕರೆತರಲಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿದ್ದ ಚಕ್ರವರ್ತಿ ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿದ್ದಾರೆ.
'ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಕೆಳ ಬೆನ್ನಿನ ಗಾಯದಿಂದಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಬುಮ್ರಾ ಬದಲಿಗೆ ಆಯ್ಕೆ ಸಮಿತಿಯು ಹರ್ಷಿತ್ ರಾಣಾ ಅವರನ್ನು ಹೆಸರಿಸಿದೆ. ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರಿಗೆ ಐದು ವಾರಗಳ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು. ಆದರೆ, 31 ವರ್ಷದ ಸೀಮರ್ ಸಕಾಲದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ವೇಗಿ ಹರ್ಷಿತ್ ರಾಣಾ ಅವರು ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ಒಡಿಐಗೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಅವರು ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಜೈಸ್ವಾಲ್ ಮತ್ತು ಚಕ್ರವರ್ತಿ ಇಬ್ಬರೂ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ತಮ್ಮ ಚೊಚ್ಚಲ ODI ಪಂದ್ಯಗಳನ್ನು ಆಡಿದ್ದರು.
ಪ್ರಯಾಣೇತರ ಬದಲೀ ಆಟಗಾರರು
ಯಶಸ್ವಿ ಜೈಸ್ವಾಲ್, ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಲ್‌ರೌಂಡರ್ ಶಿವಂ ದುಬೆ ಭಾರತದಲ್ಲೇ ಉಳಿಯಲಿದ್ದು, ತಂಡದಲ್ಲಿ ಯಾರಾದರೂ ಗಾಯಗೊಂಡರೆ ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಆಗ ದುಬೈಗೆ ತೆರಳಲಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
Advertisement