
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಮಾರ್ಚ್ 21ರಿಂದ ಆರಂಭವಾಗಲಿದ್ದು, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ರಜತ್ ಪಾಟೀದಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ ಮತ್ತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಟೀದಾರ್ ಅವರಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣದಿಂದಾಗಿ ಇನ್ಮುಂದೆ ಆರ್‌ಸಿಬಿ ನಾಯಕನಾಗಿ ರಜತ್ ಪಾಟೀದಾರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಜತ್ ಪಾಟೀದಾರ್ ಅವರನ್ನು ವಿರಾಟ್ ಕೊಹ್ಲಿ ಅಭಿನಂದಿಸಿದ್ದು, ತನ್ನನ್ನು ಸೇರಿದಂತೆ ತಂಡವನ್ನು ಮುನ್ನಡೆಸಲು ಪಾಟೀದಾರ್ ಅರ್ಹರಾಗಿದ್ದಾರೆ ಎಂದಿದ್ದಾರೆ.
'ರಜತ್ ಪಾಟೀದಾರ್ ಆರ್‌ಸಿಬಿಯ ಹೊಸ ನಾಯಕರಾಗಿದ್ದಾರೆ ಎಂದು ಎಲ್ಲರಿಗೂ ತಿಳಿಸಲು ನಾನು ಇಲ್ಲಿದ್ದೇನೆ. ರಜತ್, ಮೊದಲಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ. ಫ್ರಾಂಚೈಸಿಯಲ್ಲಿ ನೀವು ಬೆಳೆದ ರೀತಿ ಮತ್ತು ನಿಮ್ಮ ಪ್ರದರ್ಶನದಿಂದಾಗಿ ನೀವು ನಿಜವಾಗಿಯೂ ಆರ್‌ಸಿಬಿಯ ಎಲ್ಲ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ದೇಶದಾದ್ಯಂತ ಇರುವ ಅಭಿಮಾನಿಗಳು ನಿಮ್ಮ ಆಟವನ್ನು ವೀಕ್ಷಿಸಲು ತುಂಬಾ ಸಂತೋಷಪಡುತ್ತಾರೆ. ತಂಡದ ಇತರ ಸದಸ್ಯರು ನಿಮ್ಮ ಹಿಂದೆಯೇ ಇರುತ್ತಾರೆ ಮತ್ತು ನಿಮಗೆ ನಮ್ಮೆಲ್ಲರ ಬೆಂಬಲವಿದೆ' ಎಂದು ಆರ್‌ಸಿಬಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿ ತಿಳಿಸಿದ್ದಾರೆ.
ಈ ಜವಾಬ್ದಾರಿಯನ್ನು ಸ್ವೀಕರಿಸುವ ಮಟ್ಟಕ್ಕೆ ಬೆಳೆದಿರುವುದು ಖಂಡಿತವಾಗಿಯೂ ದೊಡ್ಡ ಸಾಧನೆಯಾಗಿದೆ ಮತ್ತು ನಾನು ಕೂಡ ಇದನ್ನು ಹಲವು ವರ್ಷಗಳಿಂದ ಮಾಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಫಾಫ್ ತಂಡವನ್ನು ಮುನ್ನಡೆಸಿದ್ದರು. ಇಧೀಗ ನಾಯಕನಾಗಿ ಆಯ್ಕೆಯಾಗಿರುವ ನೀವು ತಂಡವನ್ನು ಮುನ್ನಡೆಸಲಿದ್ದೀರಿ. ಇದು ನಿಮಗೆ ಸಿಕ್ಕ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. ನಿಮಗೆ ಈ ಜವಾಬ್ದಾರಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ನೀವು ಈ ಸ್ಥಾನದಲ್ಲಿರಲು ಅರ್ಹರಾಗಿದ್ದೀರಿ. ಕಳೆದೆರಡು ವರ್ಷಗಳಲ್ಲಿ ಆಟಗಾರನಾಗಿ ರಜತ್ ವಿಕಸನಗೊಂಡದ್ದನ್ನು ನಾನು ನೋಡಿದ್ದೇನೆ, ಭಾರತಕ್ಕಾಗಿ ಆಡುವ ಅವಕಾಶ ಸಿಕ್ಕಿತು. ಕಳೆದೆರಡು ವರ್ಷಗಳಲ್ಲಿ ಅವರ ಆಟ ಹಲವು ಹಂತಗಳಲ್ಲಿ ಸುಧಾರಿಸಿದೆ. ಅವರು ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ರೀತಿ ಮತ್ತು ಅವರು ವಹಿಸಿದ ಜವಾಬ್ದಾರಿ ಮೂಲಕ ಈ ಅದ್ಭುತ ಫ್ರಾಂಚೈಸಿಯನ್ನು ಮುನ್ನಡೆಸಲು ಏನು ಬೇಕೋ ಅದನ್ನು ನೀವು ಗಳಿಸಿದ್ದೀರಿ ಎಂಬುದನ್ನ ಎಲ್ಲರಿಗೂ ತೋರಿಸಿದ್ದೀರಿ ಎಂದು ಕೊಹ್ಲಿ ರಜತ್ ಬೆನ್ನು ತಟ್ಟಿದ್ದಾರೆ.
'ನಾನು ರಜತ್ ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಎಲ್ಲ ಅಭಿಮಾನಿಗಳು ಅವರನ್ನು ಸಂಪೂರ್ಣವಾಗಿ ಬೆಂಬಲಿಸಲು ನಾನು ವಿನಂತಿಸುತ್ತೇನೆ. ಅವರು ತಂಡಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ ಎಂಬುದು ನಮಗೆ ತಿಳಿದಿದೆ ಮತ್ತು ನಾವೆಲ್ಲರೂ ಅವರನ್ನು ಬೆಂಬಲಿಸಬೇಕು. ಏನಾಯಿತು ಮತ್ತು ಯಾರು ಏನು ಮಾಡಿದರೂ ಎನ್ನುವುದಕ್ಕಿಂತ ತಂಡ ಮತ್ತು ಪ್ರಾಂಚೈಸಿ ಮುಖ್ಯವಾಗುತ್ತದೆ. ಅಭಿಮಾನಿಗಳು ನಾಯಕನಾಗಿ ನಿಮ್ಮನ್ನು ನೋಡಲು ಎದುರು ನೋಡುತ್ತಿದ್ದಾರೆ ಮತ್ತು ರಜತ್ ಈ ಆವೃತ್ತಿಯಲ್ಲಿ ಅಬ್ಬರಿಸುವುದನ್ನು ನೋಡಲು ಕಾಯುತ್ತಿದ್ದಾರೆ' ಎಂದಿದ್ದಾರೆ.
Advertisement