
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಮಾರ್ಚ್ 21 ರಿಂದ ಪ್ರಾರಂಭವಾಗಲಿದ್ದು, ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುವಾರ ರಜತ್ ಪಾಟೀದಾರ್ ಅವರನ್ನು ನಾಯಕನನ್ನಾಗಿ ಘೋಷಿಸಿದೆ.
ಪಾಟಿದಾರ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ20) ಮತ್ತು ವಿಜಯ್ ಹಜಾರೆ ಟ್ರೋಫಿ (ಒಡಿಐ) ನಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. 2022 ರಿಂದ ಪಾಟೀದಾರ್ ಆರ್‌ಸಿಬಿಯಲ್ಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ RCBಯ ಕ್ರಿಕೆಟ್ ನಿರ್ದೇಶಕ ಮೊಹಮ್ಮದ್ ಬೊಬಾಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ನಿಜವಾಗಿಯೂ ನಾಯಕ ಸ್ಥಾನಕ್ಕೆ ಮೊದಲನೇ ಆಯ್ಕೆಯಾಗಿದ್ದರು. ಆದರೆ, ತಾವು ಮತ್ತು ಕೋಚ್ ಆಂಡಿ ಫ್ಲವರ್ ರಜತ್ ಪಾಟಿದಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಕಾರಣಗಳಿವೆ ಎಂದು ಹೇಳಿದ್ದಾರೆ.
'ತಂಡದಲ್ಲಿ ನಾಯಕನಾಗಲು ಅರ್ಹತೆ ಹೊಂದಿರುವವರು ಹಲವರಿರುವುದಕ್ಕೆ ನಾನು ಮತ್ತು ಆಂಡಿ ಸಂತಸಗೊಂಡಿದ್ದೇವೆ. ಆದರೆ, ನಾವು ಭಾರತೀಯ ಆಟಗಾರರ ಆಯ್ಕೆಯ ಬಗ್ಗೆ ಉತ್ಸುಕರಾಗಿದ್ದೆವು. ಏಕೆಂದರೆ, ಸ್ಥಳೀಯ ಅನುಭವವು ನಮಗೆ ಸಹಾಯಕವಾಗಿದೆ. ವಿರಾಟ್ ಕೂಡ ನಮಗೆ ಆಯ್ಕೆಯಾಗಿದ್ದರು. ತಂಡವನ್ನು ಮುನ್ನಡೆಸಲು ವಿರಾಟ್ ಅವರಿಗೆ ನಾಯಕತ್ವದ ಅಗತ್ಯವಿಲ್ಲ. ಇದು ಅವರಿಗೆ ಸ್ವಾಭಾವಿಕವಾಗಿಯೇ ಬರುತ್ತದೆ. ಅವರು ಬ್ಯಾಟ್ ಮೂಲಕ ಉದಾಹರಣೆಯಾಗಿ ಇತರರನ್ನು ಮುನ್ನಡೆಸುತ್ತಾರೆ. ತಮ್ಮ ಎನರ್ಜಿ ಮೂಲಕ ಮುನ್ನಡೆಸುತ್ತಾರೆ. ಅವರು ಅಭ್ಯಾಸ ಮಾಡುವ ವಿಧಾನ, ಪೋಷಣೆ ಎಲ್ಲವೂ ಅವರು ನಾಯಕ ಎಂಬುದನ್ನು ತೋರಿಸುತ್ತವೆ. ಈ ನಿರ್ಧಾರಕ್ಕೆ ವಿರಾಟ್ ಅವರ ಒಪ್ಪಿಗೆ ಕೂಡ ಇತ್ತು ಎಂದಿದ್ದಾರೆ.
10 ಪಂದ್ಯಗಳಿಂದ 61 ಸರಾಸರಿಯಲ್ಲಿ ಮತ್ತು 186.08 ಸ್ಟ್ರೈಕ್ ರೇಟ್‌ನಲ್ಲಿ 428 ರನ್ ಗಳಿಸಿರುವ ಪಾಟಿದಾರ್, ದೇಶೀಯ T20 ಪಂದ್ಯಾವಳಿಯಲ್ಲಿ ಅಜಿಂಕ್ಯ ರಹಾನೆ ನಂತರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
Advertisement