
ದುಬೈ: ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯಿಂದಾಗಿ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ದಕ್ಷಿಣ ಆಫ್ರಿಕಾದಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಮಂಗಳವಾರ ತಿಳಿಸಿವೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದ 40 ವರ್ಷದ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ಕೆಲ್, ಶನಿವಾರ ಭಾರತ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಬುಧವಾರ ಪ್ರಾರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಂಡದ ಮೊದಲ ಅಭ್ಯಾಸ ಪಂದ್ಯದಲ್ಲಿ ಜೊತೆಗಿದ್ದರು. ಆದರೆ, ಸೋಮವಾರ ನಡೆದ ಎರಡನೇ ಅಭ್ಯಾಸದ ಅವಧಿಯಲ್ಲಿ ಇರಲಿಲ್ಲ.
ಗುರುವಾರ ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಈ ಬೆನ್ನಲ್ಲೇ ಬೌಲಿಂಗ್ ಕೋಚ್ ತವರಿಗೆ ಮರಳಿದ್ದಾರೆ.
ಭಾರತೀಯ ಬೌಲಿಂಗ್ ಪಡೆಯಲ್ಲಿ ಸದ್ಯ ಪರಿಣಿತ ವೇಗಿಗಳು ಮತ್ತು ಒಬ್ಬ ವೇಗದ ಬೌಲಿಂಗ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಒಳಗೊಂಡಿದೆ. ಜಸ್ಪ್ರೀತ್ ಬುಮ್ರಾ ಅವರು ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಟೀಂ ಇಂಡಿಯಾ ವೇಗಿಗಳಾಗಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಶಮಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಐಸಿಸಿ ಕಾರ್ಯಕ್ರಮವನ್ನು ಈ ಬಾರಿ ಪಾಕಿಸ್ತಾನವು ಆಯೋಜಿಸುತ್ತಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಭದ್ರತೆಯ ದೃಷ್ಟಿಯಿಂದಾಗಿ ಭಾರತವು ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಭಾನುವಾರ (ಫೆ.23) ನಡೆಯಲಿದೆ.
ಮೊದಲ ಸೆಮಿಫೈನಲ್ ಮಾರ್ಚ್ 4 ರಂದು ದುಬೈನಲ್ಲಿ ನಡೆಯಲಿದ್ದು, ಭಾರತ ಅರ್ಹತೆ ಪಡೆದರೆ ಫೈನಲ್ ಕೂಡ ಮಾರ್ಚ್ 9 ರಂದು ದುಬೈನಲ್ಲಿ ನಡೆಯಲಿದೆ.
Advertisement