
ಕರಾಚಿ: ತವರಿನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನ ತಂಡಕ್ಕೆ ಗಾಯದ ಮೇಲೆ ಬರೆ ಎಂಬಂತೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ದಂಡ ಹೇರುವ ಮೂಲಕ ಮತ್ತೆ ಮುಜುಗರ ತಂದಿದೆ.
ಹೌದು.. ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ 2025 ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ ತಂಡಕ್ಕೆ ಐಸಿಸಿ ದುಬಾರಿ ದಂಡ ಹೇರಿದೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ತಂಡಕ್ಕೆ ಪಂದ್ಯ ಶುಲ್ಕದ ಶೇ.5%ರಷ್ಟು ದಂಡ ವಿಧಿಸಿದ್ದು, ಇದು ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಕಾರಣ ಏನು?
ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ 2025 ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪದ ಮೇರೆಗೆ ಪಾಕಿಸ್ತಾನ ತಂಡಕ್ಕೆ ಐಸಿಸಿ ದಂಡ ಹೇರಿದೆ. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ರಿಜ್ವಾನ್ ಪಡೆ ತಮ್ಮ ಓವರ್‌ಗಳನ್ನು ಸಮಯಕ್ಕೆ ಸರಿಯಾಗಿ ಬೌಲ್ ಮಾಡಲು ವಿಫಲರಾದರು. ನಿಗಧಿತ ಸಮಯಕ್ಕಿಂತ ಒಂದು ಓವರ್ ಕಡಿಮೆ ಮಾಡಿದ್ದಕ್ಕಾಗಿ ಐಸಿಸಿ ಪಾಕಿಸ್ತಾನ ತಂಡವನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ದಂಡ ಹೇರಿದೆ.
ಈ ಬಗ್ಗೆ ಸ್ವತಃ ಐಸಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪಾಕಿಸ್ತಾನಕ್ಕೆ ತಮ್ಮ ಪಂದ್ಯ ಶುಲ್ಕದ 5% ದಂಡ ವಿಧಿಸಿರುವುದಾಗಿ ಘೋಷಿಸಿದೆ. "ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಳಿಗೆ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್ ದರದ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿಪಡಿಸಿದ ಸಮಯದಲ್ಲಿ ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ತಪ್ಪೊಪ್ಪಿಕೊಂಡ ಪಾಕ್ ನಾಯಕ
ಇನ್ನು ಈ ಸಂಬಂಧ ಕರೆಯಲಾಗಿದ್ದ ಮ್ಯಾಚ್ ರೆಫರಿ ವಿಚಾರಣೆಯಲ್ಲೂ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ದಂಡ ಹೇರಲಾಗಿದೆ ಎಂದು ಹೇಳಲಾಗಿದೆ.
ಮಂಕಾದ ಪಾಕ್ ಬೌಲರ್ ಗಳು
ಇನ್ನು ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿತು. ಜಗತ್ತಿನಲ್ಲೇ ಅತೀ ಹೆಚ್ಚು ವೇಗಿಗಳನ್ನು ಹೊಂದಿರುವ ತಂಡ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ನ್ಯೂಜಿಲೆಂಡ್ ದಾಂಡಿಗರು ಬೃಹತ್ ಮೊತ್ತ ಪೇರಿಸಿ ಗರ್ವಭಂಗ ಮಾಡಿದ್ದರು. ಈ ಪಂದ್ಯದಲ್ಲಿ ಪಾಕ್ ಬೌಲರ್ ಗಳು ಬೌಲಿಂಗ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ನಾಯಕ ಮಹಮದ್ ರಿಜ್ವಾನ್ ಮೈದಾನದಲ್ಲಿ ಯಾವುದೇ ತಂತ್ರಗಾರಿಕೆ ಹೆಣೆದರೂ ನ್ಯೂಜಿಲೆಂಡ್ ದಾಂಡಿಗರು ಅದನ್ನು ವಿಫಲಗೊಳಿಸುತ್ತಿದ್ದರು. ಹೀಗಾಗಿ ಫೀಲ್ಡಿಂಗ್ ಹೊಂದಿಸುವಲ್ಲಿ ಮತ್ತು ತಂತ್ರಗಳನ್ನು ಯೋಜಿಸುವಲ್ಲಿ ಪಾಕಿಸ್ತಾನ ತಂಡ ಸಾಕಷ್ಟು ಸಮಯ ತೆಗೆದುಕೊಂಡಿತು. ಇದು ಸ್ಲೋ ಓವರ್ ರೇಟ್ ಗೆ ಕಾರಣವಾಯಿತು.
ಅಲ್ಲದೆ ಪಂದ್ಯದ ಮಧ್ಯೆ ಫಖರ್ ಜಮಾನ್ ಗಾಯಗೊಂಡಿದ್ದರಿಂದ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಲಾಯಿತು, ಟಾಮ್ ಲಾಥಮ್ ತಲೆಗೆ ಪೆಟ್ಟು ಬಿದ್ದಿದ್ದರಿಂದಲೂ ಪಂದ್ಯ ವಿಳಂಬವಾಗಿತ್ತು.
Advertisement