
ದುಬೈನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವಿನೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಿರುವ ಟೀಂ ಇಂಡಿಯಾ ಇಂದು (ಭಾನುವಾರ) ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ. ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಭಾರತವು ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಪ್ರಾರಂಭಿಸಿದರೆ, ಪಾಕಿಸ್ತಾನವು ಕರಾಚಿಯಲ್ಲಿ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದು, ಇದೀಗ ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿದೆ.
ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ದುಬೈನಲ್ಲಿ ಇಂದು ಭಾರತದ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಿರುವ ಒತ್ತಡದಲ್ಲಿ ಸಿಲುಕಿದೆ. ಭಾರತದ ಅನುಭವಿ ಕ್ರಿಕೆಟಿಗ ಅತುಲ್ ವಾಸನ್ ಇದೀಗ ಪಾಕ್ ತಂಡಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಸ್ಪರ್ಧೆಯನ್ನು ಕಾಯ್ದುಕೊಳ್ಳಲು ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಬೇಕು ಎಂದಿದ್ದಾರೆ.
'ಪಾಕಿಸ್ತಾನ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಮಜಾ ಆಯೇಗಾ (ಇದು ವಿನೋದಮಯವಾಗಿರುತ್ತದೆ). ನೀವು ಪಾಕಿಸ್ತಾನವನ್ನು ಗೆಲ್ಲಲು ಬಿಡದಿದ್ದರೆ, ನೀವು ಏನು ಮಾಡುತ್ತೀರಿ? ಪಾಕಿಸ್ತಾನ ಗೆದ್ದರೆ ಅದು ಸ್ಪರ್ಧೆಯಾಗಿ ಬದಲಾಗುತ್ತದೆ. ಸಮಾನ ಹೋರಾಟ ಇರಬೇಕು' ಎಂದು ಅವರು ಸುದ್ದಿಸಂಸ್ಥೆ ANI ಗೆ ತಿಳಿಸಿದರು.
Advertisement