Virat Kohli Injured
ಕೊಹ್ಲಿ ಕಾಲಿಗೆ ಗಾಯ

ICC Champions Trophy 2025: ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆಘಾತ; ವಿರಾಟ್ ಕೊಹ್ಲಿ ಕಾಲಿಗೆ ಗಾಯ!

ಭಾರತ ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ಹೀಗಾಗಿ ಪಾಕ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Published on

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವೊಂದು ಎದುರಾಗಿದ್ದು. ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಹೌದು.. ಭಾರತ ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ಹೀಗಾಗಿ ಪಾಕ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಶನಿವಾರ ನಡೆದ ಅಭ್ಯಾಸದ ವೇಳೆ ಕೊಹ್ಲಿಗೆ ಗಾಯವಾಗಿದ್ದು, ಹೀಗಾಗಿ ಅವರು ಅರ್ಧದಲ್ಲೇ ಅಭ್ಯಾಸವನ್ನು ನಿಲ್ಲಿಸಿದ್ದರು. ಅಲ್ಲದೆ ಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಕುಳಿತಿರುವ ಕೊಹ್ಲಿ ಫೋಟೋಗಳು ಇದೀಗ ವ್ಯಾಪಕ ವೈರಲ್ ಆಗುತ್ತಿವೆ. ಇದಾಗ್ಯೂ ಅವರ ಗಾಯದ ಗಂಭೀರತೆ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ದುಬೈ ಇಂಟರ್​ನ್ಯಾಷನಲ್ ಮೈದಾನದಲ್ಲಿ ಶನಿವಾರ ನಡೆದ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಮೈದಾನದಿಂದ ಹೊರಗುಳಿದಿದ್ದರು. ಅಲ್ಲದೆ ಎಡಗೈ ಕಾಲಿಗೆ ಐಸ್ ಪ್ಯಾಕ್ ಇಟ್ಟು ವಿಶ್ರಾಂತಿ ಪಡೆಯುತ್ತಿದ್ದರು.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದ ಕೊಹ್ಲಿ

ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಮೊಣಕಾಲಿಗೆ ಗಾಯವಾಗಿತ್ತು. ಹೀಗಾಗಿ ಅವರು ಆ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋದಲ್ಲೂ ಕೊಹ್ಲಿ ಮೊಣಕಾಲಿಗೆ ಐಸ್ ಪ್ಯಾಕ್ ಇಟ್ಟಿರುವುದು ಕಾಣಬಹುದು. ಇದು ಕೊಹ್ಲಿ ಮತ್ತೆ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇತ್ತ ಕೊಹ್ಲಿಯ ಲಭ್ಯತೆ ಅಥವಾ ಅಲಭ್ಯತೆ ಬಗ್ಗೆ ಬಿಸಿಸಿಐ ಕಡೆಯಿಂದಲೂ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.

ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ನಡುವಣ ಈ ಹೈವೋಲ್ಟೇಜ್ ಪಂದ್ಯವು ಇಂದು (ಫೆ.23) ಮಧ್ಯಾಹ್ನ 2.30 ರಿಂದ ಶುರುವಾಗಲಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್​ಗೇರುವುದು ಬಹುತೇಕ ಖಚಿತವಾಗಲಿದೆ. ಅತ್ತ ಈ ಪಂದ್ಯದಲ್ಲಿ ಪಾಕ್ ಪಡೆ ಸೋತರೆ ಸೆಮಿಫೈನಲ್ ಆಸೆ ಕ್ಷೀಣಿಸಲಿದ್ದು, ಪಾಕ್ ಟೂರ್ನಿಯಿಂದಲೇ ಹೊರಬೀಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com