
ದುಬೈ: ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಇನ್ನು ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ಬ್ಯಾಟಿಂಗ್ ನಲ್ಲಿ ಪಾಕ್ ಆಟಗಾರರ ವೈಫಲ್ಯ ಬೆನ್ನಲ್ಲೇ ಕಳಪೆ ಫೀಲ್ಡಿಂಗ್ ನಿಂದಾಗಿ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ.
ಭಾರತದ ಪರ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 20 ರನ್ ಗೆ ಔಟಾಗಿ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಜೊತೆ ಸೇರಿ ಗಿಲ್ ತಾಳ್ಮೆಯ ಬ್ಯಾಟಿಂಗ್ ಮಾಡಿ 46 ರನ್ ಪೇರಿಸಿದರು. ಆದರೆ ಅಬ್ರಾರ್ ಅಹ್ಮದ್ ಬೌಲಿಂಗ್ ನಲ್ಲಿ ಗಿಲ್ ಬೌಲ್ಡ್ ಔಟ್ ಆದರು. ಈ ವೇಳೆ ಅಬ್ರಾರ್ ಸಂಭ್ರಮಾಚರಣೆ ಮಾಡಿದರು. ವಿರಾಟ್ ಕೊಹ್ಲಿ ಎದುರೇ ವಿಚಿತ್ರ ಕಣ್ಸನ್ನೆ ಮಾಡುವ ಮೂಲಕ ಕಿಚಾಯಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಪರ ಅಬ್ರಾರ್ ಅಹ್ಮದ್ 10 ಓವರ್ ಗಳನ್ನು ಮುಕ್ತಾಯಗೊಳಿಸಿದ್ದು 28 ರನ್ ಗಳನ್ನು ನೀಡಿ 1 ವಿಕೆಟ್ ಪಡೆದರು. ಇನ್ನು ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಬ್ರಾರ್ ನನ್ನು ಮೈದಾನದಲ್ಲೇ ವಿರಾಟ್ ಕೊಹ್ಲಿ ಶೇಕ್ ಹ್ಯಾಂಡ್ ಮಾಡಿ ಯುವ ಕ್ರಿಕೆಟಿಗನನ್ನು ಪ್ರೋತ್ಸಾಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 241 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪ್ರಸ್ತುತ 38 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. ಗೆಲುವಿಗೆ ಇನ್ನು 33 ರನ್ ಬೇಕಿದ್ದು. ವಿರಾಟ್ ಕೊಹ್ಲಿ ಅಜೇಯ 85 ಮತ್ತು ಶ್ರೇಯಸ್ ಅಯ್ಯರ್ 56 ರನ್ ಗಳಿಸಿ ಆಡುತ್ತಿದ್ದಾರೆ.
Advertisement