
ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ವಿರಾಟ್ ಕೊಹ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಇದೀಗ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸುದ್ದಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಐಷಾರಾಮಿ ವಾಚ್ ಧರಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 8 ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕ್ ತಂಡವನ್ನು ಕಟ್ಟಿಹಾಕಲು ನೆರವಾದರು. ಆದರೆ, ಇದೀಗ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ವಾಚ್ ಧರಿಸುವ ಮೂಲಕ ಹಾರ್ದಿಕ್ ಎಲ್ಲರ ಗಮನ ಸೆಳೆದಿದ್ದಾರೆ.
ಹಾರ್ದಿಕ್ 800,000 ಡಾಲರ್ (ಅಂದಾಜು 6.92 ಕೋಟಿ ರೂ.) ಮೌಲ್ಯದ ರಿಚರ್ಡ್ ಮಿಲ್ಲೆ RM 27-02 ಟೈಮ್‌ಪೀಸ್ ಧರಿಸಿದ್ದರು. ಈ ಅಲ್ಟ್ರಾ-ಐಷಾರಾಮಿ ಗಡಿಯಾರವು ಸಾಮಾನ್ಯವಾಗಿ ಜಗತ್ತಿನಾದ್ಯಂತ ಎಲ್ಲಿಯೂ ಸುಲಭವಾಗಿ ಸಿಗುವುದಿಲ್ಲ. ಹಾರ್ದಿಕ್ ಧರಿಸಿದ್ದ ವಾಚ್‌ನ ಮೌಲ್ಯವನ್ನು ಅರಿತ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಅಪರೂಪದ ಈ ವಾಚ್ ಅನ್ನು ಮೂಲತಃ ಟೆನಿಸ್ ದಂತಕಥೆ ರಾಫೆಲ್ ನಡಾಲ್ ಅವರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದು ತನ್ನ ಕ್ರಾಂತಿಕಾರಿ ಕಾರ್ಬನ್ TPT ಯುನಿಬಾಡಿ ಬೇಸ್‌ಪ್ಲೇಟ್‌ಗೆ ಹೆಸರುವಾಸಿಯಾಗಿದೆ. ಇದು ಸಾಟಿಯಿಲ್ಲದ ಆಘಾತ ಪ್ರತಿರೋಧ ಮತ್ತು ದೀರ್ಘಕಾಲ ಬಾಳಿಕೆ ಬರುವಂತದ್ದಾಗಿದೆ.
ಅಂತಹ 50 ವಾಚ್‌ಗಳನ್ನು ಮಾತ್ರ ಇದುವರೆಗೆ ಉತ್ಪಾದಿಸಲಾಗಿದೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಮತ್ತೊಂದು ಮೈಲಿಗಲ್ಲು
ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 200 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಹಾರ್ದಿಕ್ ಅವರು ಎಂಟು ಓವರ್‌ಗಳಲ್ಲಿ, 3.87 ಎಕಾನಮಿಯಲ್ಲಿ 31 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದರು. ಬೌಂಡರಿಗಳ ಸುರಿಮಳೆಗೈಯುತ್ತಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರ ನಿರ್ಣಾಯಕ ವಿಕೆಟ್ ಪಡೆದರು ಮತ್ತು ಅರ್ಧಶತಕ ಪೂರೈಸಿದ್ದ ಸೌದ್ ಶಕೀಲ್ ವಿಕೆಟ್ ಕಬಳಿಸಿದರು.
Advertisement