
ಭಾರತ ಕ್ರಿಕೆಟ್ ತಂಡದ ಬಗ್ಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಅವರು ಮಾಡಿದ್ದ ಹಳೆಯ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಗುರಿಯಾಗಿದೆ. ಬುಧವಾರ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ರೋಚಕ ಗೆಲುವು ಸಾಧಿಸಿದ್ದು, ಜೋಸ್ ಬಟ್ಲರ್ ನೇತೃತ್ವದ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಕಾರಣ ಡಕೆಟ್ ಅವರು ಮಾಡಿದ್ದ ಹಳೆಯ ಹೇಳಿಕೆಯನ್ನು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಇಂಗ್ಲೆಂಡ್ ಸೋಲಿಸಿದರೆ ಸಾಕು. ಭಾರತದ ವಿರುದ್ಧ 3-0 ಏಕದಿನ ಸರಣಿ ಸೋಲಿನ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಹೇಳಿದ್ದರು. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದ್ದು, ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ, ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.
'ನಾವು ಟೀಂ ಇಂಡಿಯಾ ವಿರುದ್ಧ 3-0 ಅಂತರದಿಂದ ಸೋತರೂ ಅದು ನನಗೆ ಮುಖ್ಯವಾಗುವುದಿಲ್ಲ. ಏಕೆಂದರೆ, ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಅವರನ್ನು ಸೋಲಿಸುವುದೇ ನನಗೆ ಮುಖ್ಯ' ಎಂದು ಅಹಮದಾಬಾದ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಡಕೆಟ್ ಹೇಳಿದ್ದರು.
ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವುದು ಪ್ರಸ್ತುತ ಸರಣಿಯಲ್ಲಿನ ಸೋಲನ್ನು ಸರಿದೂಗಿಸುತ್ತದೆ. ಸರಣಿಯ ಫಲಿತಾಂಶಕ್ಕಿಂತ ಹೆಚ್ಚು ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆಲ್ಲುವುದೇ ನನಗೆ ಮುಖ್ಯ ಎಂದಿದ್ದರು.
ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅವರ 177 ರನ್ ಮತ್ತು ಅಜ್ಮತುಲ್ಲಾ ಒಮರ್‌ಜೈ ಅವರ ಐದು ವಿಕೆಟ್‌ಗಳ ನೆರವಿನಿಂದ ಅಫ್ಘಾನಿಸ್ತಾನ ತಂಡವು ಬುಧವಾರ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಂಟು ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ಸ್ ಟ್ರೋಫಿಯಿಂದ ಹೊರದಬ್ಬಲು ನೆರವಾಯಿತು.
ಲಾಹೋರ್‌ನಲ್ಲಿ ನಡೆದ ವರ್ಚುವಲ್ ನಾಕೌಟ್ ಟೈನಲ್ಲಿ ಅಫ್ಘಾನಿಸ್ತಾನ 7 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು. ನಂತರ ಇಂಗ್ಲೆಂಡ್ ಅನ್ನು 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಅಪ್ಗಾನಿಸ್ತಾನ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
Advertisement