'ಈ ವಯಸ್ಸಿನಲ್ಲಿ ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ..': ಯೋಗರಾಜ್ ಸಿಂಗ್‌ಗೆ ವಾಸಿಂ ಅಕ್ರಮ್ ತಿರುಗೇಟು!

ಈ ವಯಸ್ಸಿನಲ್ಲಿ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ನಾನು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಹಾಯ ಮಾಡಲು ಬಯಸುತ್ತೇನೆ.
ಯೋಗರಾಜ್ ಸಿಂಗ್‌ - ವಾಸಿಂ ಅಕ್ರಮ್
ಯೋಗರಾಜ್ ಸಿಂಗ್‌ - ವಾಸಿಂ ಅಕ್ರಮ್
Updated on

ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಿಂದ ಪಾಕಿಸ್ತಾನ ಈಗಾಗಲೇ ಹೊರಬಿದ್ದಿದ್ದು, ಇದೀಗ ಪಾಕ್ ತಂಡದ ಕುರಿತು ಚರ್ಚೆಗಳು ಮುನ್ನೆಲೆಗೆ ಬಂದಿವೆ. ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ಮಾಜಿ ಕ್ರಿಕೆಟಿಗರ ವಿರುದ್ಧವೂ ಆರೋಪಗಳು ಕೇಳಿಬರುತ್ತಿವೆ. ಭಾರತದ ಮಾಜಿ ಕ್ರಿಕೆಟಿಗ ಮತ್ತು ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಪಾಕಿಸ್ತಾನದ ಆಟಗಾರರಿಗೆ ಅಲ್ಲಿನ ಮಾಜಿ ಕ್ರಿಕೆಟಿಗರು ಏಕೆ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ವಾಸಿಂ ಅಕ್ರಮ್, ಶೋಯೆಬ್ ಅಖ್ತರ್ ಮತ್ತು ಇತರರನ್ನು ಪ್ರಶ್ನಿಸಿದ್ದರು. ಈ ಟೀಕೆಗಳಿಗೆ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಯಸ್ಸಿನಲ್ಲಿ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ನಾನು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಹಾಯ ಮಾಡಲು ಬಯಸುತ್ತೇನೆ. ಆದರೆ, ಅದಕ್ಕಾಗಿ ನೀವು (ಯೋಗರಾಜ್ ಸಿಂಗ್) ಏಕೆ ನನಗೆ ಹಣ ನೀಡಬೇಕು ಎಂದು ಬಯಸುತ್ತಿದ್ದೀರಿ ಎಂದು ವಾಸಿಂ ಅಕ್ರಮ್ ಪ್ರಶ್ನಿಸಿದ್ದಾರೆ.

ಡಿಪಿ ವರ್ಲ್ಡ್ 'ಡ್ರೆಸ್ಸಿಂಗ್ ರೂಮ್'ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ವಾಸಿಂ ಅಕ್ರಮ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ಪಾಕಿಸ್ತಾನದ ರಾಷ್ಟ್ರೀಯ ತಂಡದೊಂದಿಗೆ ತರಬೇತುದಾರರಾಗಿ ಹೋದಾಗ ಪಾಕಿಸ್ತಾನಿ ಕ್ರಿಕೆಟಿಗರು ಅವರೊಂದಿಗೆ ಹೇಗೆ ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ತೋರಿಸಲು ವಕಾರ್ ಯೂನಿಸ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

'ಆಗ್ಗಾಗ್ಗೆ ಜನರು ನನ್ನನ್ನು ಟೀಕಿಸುತ್ತಲೇ ಇರುತ್ತಾರೆ. ನಾನು ಕೇವಲ ಮಾತನಾಡುತ್ತೇನೆ ಹೊರತು ಪಾಕ್ ತಂಡಕ್ಕಾಗಿ ನಾನು ಏನನ್ನೂ ಮಾಡಿಲ್ಲ ಎಂದು ಹೇಳುತ್ತಿರುತ್ತಾರೆ. ನಾನು ಪಾಕಿಸ್ತಾನದ ಕೋಚ್‌ಗಳನ್ನು ನೋಡಿದಾಗ, ಕೋಚ್ ಆದ ನಂತರ ಹಲವು ಬಾರಿ ವಜಾಗೊಂಡಿರುವ ವಕಾರ್ ಕಣ್ಮುಂದೆ ಬರುತ್ತಾರೆ ಮತ್ತು ಅವರ ಸ್ಥಿತಿ ನೆನಪಾಗುತ್ತದೆ. ವಕಾರ್ ಯೂನಿಸ್ ಸೇರಿದಂತೆ ಪಾಕಿಸ್ತಾನ ತಂಡದ ಕೋಚ್‌ಗಳನ್ನು ತಮ್ಮ ಸ್ಥಾನಗಳಿಂದ ಪದೇ ಪದೆ ವಜಾಗೊಳಿಸಲಾಗಿದೆ. ನೀವು ಅವರನ್ನು ಅಗೌರವಗೊಳಿಸುತ್ತೀರಿ. ನಾನು ಅದನ್ನು ಸಹಿಸಲಾರೆ' ಎಂದು ಟೆನ್ ಸ್ಪೋರ್ಟ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ರಮ್ ಹೇಳಿದರು.

ಯೋಗರಾಜ್ ಸಿಂಗ್‌ - ವಾಸಿಂ ಅಕ್ರಮ್
Champions Trophy 2025: 'ಭಾರತದ ಎದುರು ಸೋಲು, ಪಾಕಿಸ್ತಾನ ಕ್ರಿಕೆಟ್ ಸರ್ವನಾಶ'; ಜೈಲಿನಿಂದಲೇ ಮಾಜಿ ಪ್ರಧಾನಿ Imran Khan ಕಳವಳ

ಒಂದು ಪಂದ್ಯವನ್ನು ಗೆಲ್ಲದೆ ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಯೋಗರಾಜ್ ಸಿಂಗ್, ವಾಸಿಂ ಅಕ್ರಮ್ ಮತ್ತು ಶೋಯೆಬ್ ಅಖ್ತರ್ ಅವರಂತಹ ಮಹಾನ್ ಕ್ರಿಕೆಟಿಗರು ಟಿವಿ ಶೋ ಗಳಲ್ಲಿ ಕುಳಿತು ಪಾಕಿಸ್ತಾನದ ಆಟಗಾರರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವ ಬದಲು, ಕೋಚಿಂಗ್ ಕ್ಯಾಂಪ್‌ಗಳಲ್ಲಿ ಪಾಕ್ ಆಟಗಾರರಿಗೆ ಸಹಾಯ ಮಾಡಬಹುದು ಎಂದಿದ್ದಾರೆ. ಈ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಕ್ರಮ್, ತಂಡಕ್ಕೆ ಉಚಿತವಾಗಿಯೇ ಸಹಾಯ ಮಾಡಲು ಸಿದ್ಧನಿದ್ದೇನೆ. ಆದರೆ, ಅವರಿಂದಾಗುವ ದುರ್ವರ್ತನೆಯನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಈ ವಯಸ್ಸಿನಲ್ಲಿ ವೇಗಿಗಳು ಸಾಮಾನ್ಯವಾಗಿ ಯಾವುದೇ ಒತ್ತಡಗಳಿಲ್ಲದ ಜೀವನವನ್ನು ನಡೆಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.

'ಈ ರೀತಿಯ ಚರ್ಚೆಗಳನ್ನು ಮಾಡಲು ವಾಸಿಂ ಅಕ್ರಮ್ ಅವರಿಗೆ ನಾಚಿಕೆಯಾಗಬೇಕು. ಶೊಯೇಬ್ ಅಖ್ತರ್ ಕೂಡ ಬೇಡದ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ವಾಸಿಂ ಅಕ್ರಮ್ ಕಾಮೆಂಟ್ರಿ ಹೇಳಿ ದುಡ್ಡು ಮಾಡುತ್ತಿದ್ದಾರೆ. ಮೊದಲು ಅವರ ದೇಶಗಳಿಗೆ ಮರಳಿ ಆಟಗಾರರಿಗೆ ತರಬೇತಿ ನೀಡಲಿ. ಈ ಮಾಜಿ ಆಟಗಾರರು ಪಾಕಿಸ್ತಾನ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದನ್ನು ನಾನು ಎದುರು ನೋಡುತ್ತೇನೆ. ಒಂದು ವೇಳೆ ಅವರಿಂದ ಇದು ಆಗದಿದ್ದಲ್ಲಿ ನಾನೇ ಪಾಕಿಸ್ತಾನಕ್ಕೆ ತೆರಳಿ ಒಂದು ವರ್ಷದೊಳಗೆ ವಿಶ್ವಕಪ್ ಗೆಲ್ಲಬಲ್ಲ ತಂಡವನ್ನಾಗಿ ಮಾಡುತ್ತೇನೆ’ ಎಂದು ಯೋಗರಾಜ್ ಸಿಂಗ್ ಹೇಳಿದ್ದರು.

ಯೋಗರಾಜ್ ಸಿಂಗ್‌ - ವಾಸಿಂ ಅಕ್ರಮ್
'ಮಂಗಗಳು ಕೂಡ ಇಷ್ಟೊಂದು ತಿನ್ನಲ್ಲ...': ಭಾರತದ ವಿರುದ್ಧ ಸೋತ ಪಾಕಿಸ್ತಾನದ ವಿರುದ್ಧ ಪಾಕ್ ಮಾಜಿ ಆಟಗಾರ ಕಿಡಿ

'ನಾನು ಪಾಕಿಸ್ತಾನ ಕ್ರಿಕೆಟ್‌ಗೆ ಸಹಾಯ ಮಾಡಲು ಬಯಸುತ್ತೇನೆ. ಆದರೆ, ಅದಕ್ಕಾಗಿ ನೀವು ಏಕೆ ಹಣ ಪಾವತಿಸಲು ಬಯಸುವಿರಿ. ನಾನು ಉಚಿತವಾಗಿಯೇ ತಂಡದ ಸಹಾಯಕ್ಕೆ ಲಭ್ಯವಿದ್ದೇನೆ. ನಾನು ತಂಡಕ್ಕೆ ತರಬೇತಿ ನೀಡಬೇಕೆಂದು ನೀವು ಬಯಸಿದರೆ, ಶಿಬಿರವನ್ನು ಆಯೋಜಿಸಿ. ನಾನು ಸಹಾಯ ಮಾಡುತ್ತೇನೆ. ದೊಡ್ಡ ಪಂದ್ಯಾವಳಿಗೂ ಮುನ್ನ ಕ್ರಿಕೆಟಿಗರೊಂದಿಗೆ ನಾನು ಸಮಯ ಕಳೆಯಬೇಕೆಂದು ನೀವು ಬಯಸಿದರೆ, ನಾನು ಅದನ್ನು ಮಾಡುತ್ತೇನೆ. ಆದರೆ ಈಗ ನನಗೆ 58 ವರ್ಷ, ಈ ವಯಸ್ಸಿನಲ್ಲಿ ನಾನು ನೀವು ಮಾಡುವ ಇಂತಹ ಅವಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ವಯಸ್ಸಿನಲ್ಲಿ ಒತ್ತಡದ ಜೀವನ ನಡೆಸಲು ಸಾಧ್ಯವಿಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com