
ಸಿಡ್ನಿ: ಡ್ರೆಸ್ಸಿಂಗ್ ರೂಂನಲ್ಲಿ ನಡೆಯುವ ಚರ್ಚೆಗಳ ಗೌಪ್ಯತೆ ಕಾಪಾಡಿಕೊಳ್ಳಬೇಕು. ತಂಡದ ಆಂತರಿಕ ವಿಷಯಗಳನ್ನು ಮಾಧ್ಯಮ ಅಥವಾ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬಾರದು ಎಂದು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಆಟಗಾರರ ಜೊತೆ ನಾನು ಪ್ರಮಾಣಿಕವಾಗಿ ಮಾತನಾಡಿದ್ದು, ತಂಡದಲ್ಲಿ ಉಳಿಯಲು ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದ್ದಾರೆ.
ಶುಕ್ರವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಸದ್ಯ ಉತ್ತಮ ಪ್ರದರ್ಶನ ನೀಡದ ನಾಯಕ ರೋಹಿತ್ ಶರ್ಮಾ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಕೊಡಲು ಗಂಭೀರ್ ನಿರಾಕರಿಸಿದರು. ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅದು ನಿಜವಲ್ಲ ಎಂದರು.
'ಕೋಚ್ ಮತ್ತು ಆಟಗಾರರ ನಡುವಿನ ಚರ್ಚೆಗಳು ಡ್ರೆಸ್ಸಿಂಗ್ ರೂಮ್‌ನಲ್ಲಿಯೇ ಉಳಿಯಬೇಕು. ಅವು ಕೇವಲ ವರದಿಗಳಷ್ಟೇ, ಸತ್ಯವಲ್ಲ' ಎಂದು ಗಂಭೀರ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಾಮಾಣಿಕರು ಇರುವವರೆಗೆ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿರುತ್ತದೆ. ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಳಿಯಲು ಅವಕಾಶವಿರುತ್ತದೆ. ಪ್ರಾಮಾಣಿಕ ಮಾತುಗಳು ಮತ್ತು ಪ್ರಾಮಾಣಿಕತೆ ಮುಖ್ಯ ಎಂದು ಅವರು ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಟೀಂ ಇಂಡಿಯಾದ ನಾಯಕ ಏಕೆ ಬಂದಿಲ್ಲ ಮತ್ತು ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಗೌತಮ್ ಗಂಭೀರ್ ನಿರಾಕರಿಸಿದರು.
'ನನ್ನ ಮತ್ತು ರೋಹಿತ್ ನಡುವೆ ಎಲ್ಲವೂ ಚೆನ್ನಾಗಿದೆ. ತಂಡದ ಮುಖ್ಯ ಕೋಚ್ ಆಗಿ ಇಲ್ಲಿದ್ದೇನೆ ಮತ್ತು ಸದ್ಯಕ್ಕೆ ಅಷ್ಟೇ ಸಾಕು. ಪಿಚ್ ನೋಡಿದ ನಂತರ ನಾವು ಪ್ಲೇಯಿಂಗ್ ಇಲೆವೆನ್ ಅನ್ನು ನಿರ್ಧರಿಸುತ್ತೇವೆ. ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ಗೆಲ್ಲುವ ತಂತ್ರಗಳ ಬಗ್ಗೆ ಮಾತ್ರ ಹಿರಿಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಚರ್ಚೆಗಳು ನಡೆದಿವೆ' ಎಂದು ಹೇಳಿದರು.
'ನಾವು ಕೆಲಸ ಮಾಡಬೇಕಾದ ವಿಭಾಗಗಳು ಯಾವುವು ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ನಾವು ಅವರೊಂದಿಗೆ ಒಂದೇ ಒಂದು ಮಾತುಕತೆಯನ್ನು ನಡೆಸಿದ್ದೇವೆ. ಅದುವೇ ಟೆಸ್ಟ್ ಪಂದ್ಯಗಳನ್ನು ಹೇಗೆ ಗೆಲ್ಲುವುದೆಂದು' ಎಂದರು.
ವೇಗಿ ಆಕಾಶ್ ದೀಪ್ ಅವರ ಬದಲಿ ಆಟಗಾರ ಯಾರೆಂಬುದನ್ನು ಹೆಸರಿಸದ ಗಂಭೀರ್, ಟೆಸ್ಟ್‌ನಿಂದ ಅವರು ಹೊರಗುಳಿಯಲಿದ್ದಾರೆ ಎಂಬುದನ್ನಷ್ಟೇ ಖಚಿತಪಡಿಸಿದ್ದಾರೆ. ಇಕ್ಕಟ್ಟಿನ ಸಂದರ್ಭಗಳಲ್ಲಿ ರಿಷಭ್ ಪಂತ್ ಅವರಂತಹ ಆಟಗಾರರ ಆಯ್ಕೆಯ ಬಗ್ಗೆ ಕೇಳಿದಾಗ, ತಂಡದ ಹಿತಾಸಕ್ತಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
'ನಾನು ವ್ಯಕ್ತಿಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ತಂಡದ ಹಿತವೇ ಮುಖ್ಯವಾಗಿರುತ್ತದೆ. ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು. ಆದರೆ, ಕ್ರಿಕೆಟ್‌ನಂತಹ ತಂಡದ ಕ್ರೀಡೆಯಲ್ಲಿ, ಆಟಗಾರರು ವೈಯಕ್ತಿಕ ಕೊಡುಗೆಗಳು ಮುಖ್ಯವಾಗಿರುತ್ತವೆ. ಆದರೆ, ಯಾವಾಗಲೂ ಅವರ ಕೊಡುಗೆಯು ತಂಡದ ಉದ್ದೇಶಗಳು ಮತ್ತು ಒಟ್ಟಾರೆ ಯಶಸ್ಸಿಗೆ ಹೊಂದಿಕೆಯಾಗಬೇಕು' ಎಂದು ಅವರು ಹೇಳಿದರು.
Advertisement