
ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಹಂಚಿಕೊಂಡ ಭಾರತದ ಅಧಿಕೃತ ತಂಡದ ಪಟ್ಟಿಯಿಂದ ರೋಹಿತ್ ಶರ್ಮಾ ಹೆಸರು ಕಣ್ಮರೆಯಾಗಿದೆ. ಶುಕ್ರವಾರ ಬೆಳಿಗ್ಗೆ ಟಾಸ್ ವೇಳೆ ಜಸ್ಪ್ರೀತ್ ಬುಮ್ರಾ, ರೋಹಿತ್ ಸ್ವತಃ ವಿಶ್ರಾಂತಿ ಪಡೆದಿದ್ದಾರೆ ಎಂದರು.
ರೋಹಿತ್ ಅನುಪಸ್ಥಿತಿಯ ಬಗ್ಗೆ ಪತ್ರಿಕಾ ಪ್ರಕಟಣೆ ಅಥವಾ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾದ ತಂಡದ ಪಟ್ಟಿಯಲ್ಲಿ ಮೀಸಲು ಆಟಗಾರರ ಪಟ್ಟಿಯಲ್ಲೂ ರೋಹಿತ್ ಹೆಸರು ಕಾಣಿಸಿಕೊಂಡಿಲ್ಲ.
ಮತ್ತೆ ತಂಡ ಸೇರಿಕೊಂಡಿರುವ ಶುಭಮನ್ ಗಿಲ್ ಮತ್ತು ಪ್ರಸಿದ್ಧ್ ಕೃಷ್ಣ ಸೇರಿದಂತೆ ಪ್ಲೇಯಿಂಗ್ ಇಲೆವೆನ್ ಆಟಗಾರರ ಹೊರತಾಗಿ, ಬೆಂಚ್‌ನಲ್ಲಿ ಕೂತಿರುವ ಭಾರತ ತಂಡದ ಎಲ್ಲ ಹೆಸರನ್ನು ಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ, ರೋಹಿತ್ ಶರ್ಮಾ ಅವರ ಹೆಸರನ್ನು ಅದರಲ್ಲಿ ಉಲ್ಲೇಖಿಸಿಲ್ಲ. ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಅಭಿಮನ್ಯು ಈಶ್ವರನ್ ಮತ್ತು ಹರ್ಷಿತ್ ರಾಣಾ ಅವರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.
ಸಿಡ್ನಿ ಟೆಸ್ಟ್‌ಗಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದು, ಅವರ ಬದಲಿಗೆ ಶುಭಮನ್ ಗಿಲ್ ತಂಡಕ್ಕೆ ವಾಪಸ್ಸಾಗಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿದ್ದ ಆಕಾಶ್ ದೀಪ್‌ಗೆ ವಿಶ್ರಾಂತಿ ನೀಡಲಾಗಿದ್ದು, ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ.
ರೋಹಿತ್ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯಲು ಕಾರಣವೇನು?
ನಾಯಕ ರೋಹಿತ್ ಶರ್ಮಾ 2024ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಸಿಡ್ನಿ ಟೆಸ್ಟ್‌ಗೆ ಮುನ್ನ ಭಾರತ ಆಡಿರುವ 7 ಟೆಸ್ಟ್‌ಗಳಲ್ಲಿ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ ಆರರಲ್ಲಿ 5 ಪಂದ್ಯ ಸೋತಿದ್ದು, ಒಂದು ಡ್ರಾನಲ್ಲಿ ಅಂತ್ಯವಾಗಿದೆ. ಟೆಸ್ಟ್ ಆರಂಭಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮಾತನಾಡಿದ್ದು, ಸದ್ಯ ಸರಣಿಯ ಅಂತಿಮ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ.
ಮೂರು ಟೆಸ್ಟ್‌ಗಳಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 31 ರನ್ ಗಳಿಸಿದ ನಂತರ ರೋಹಿತ್ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಎನ್ನುವ ಮಾತುಗಳು ಎಲ್ಲೆಡೆ ಕೇಳಿಬಂದಿತ್ತು. 37 ವರ್ಷದ ರೋಹಿತ್, ರನ್ ಗಳಿಸಲು ಹೆಣಗಾಡುತ್ತಿರುವುದು ಕಂಡುಬಂದಿದೆ. ಭಾರತವು ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಸೋತ ನಂತರ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-2 ರಿಂದ ಮುನ್ನಡೆ ಕಾಯ್ದುಕೊಂಡ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ವೇಗವನ್ನು ಪಡೆದುಕೊಂಡವು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಜೀವಂತವಾಗಿರಿಸಲು ಭಾರತ ಈ ಪಂದ್ಯ ಗೆಲ್ಲಲೇಬೇಕಿದೆ. ಬಳಿಕ ನಡೆಯುವ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದಲ್ಲಿ ಗೆದ್ದರೆ ಮಾತ್ರ ಭಾರತಕ್ಕೆ ಫೈನಲ್ ತಲುಪುವ ಅವಕಾಶವಿರುತ್ತದೆ.
Advertisement