
ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಅಂತ್ಯವಾಗಿದ್ದು 3-1 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಸರಣಿ ಅಂತ್ಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಗೆ ಆಯೋಜಕರು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸುನಿಲ್ ಗವಾಸ್ಕರ್ ಅವರಿಗೆ ಆಯೋಜಕರು ಅಪಮಾನ ಮಾಡಿದ್ದು, ಅವರ ಗೈರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವ ಘಟನೆ ನಡೆದಿದೆ.
ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಹಾಗೂ ಭಾರತದ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಈ ಸರಣಿ ನಡೆದಿತ್ತು. ಸರಣಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಬಾರ್ಡರ್ ಅವರು ಟ್ರೋಫಿಯನ್ನು ನೀಡಿದರು. ಆದರೆ ಅದೇ ಸಮಯದಲ್ಲಿ ಗವಾಸ್ಕರ್, ಸ್ಥಳದಲ್ಲಿದ್ದರೂ ಅವರನ್ನು ನಿರ್ಲಕ್ಷಿಸಲಾಗಿತ್ತು.
ಆದರೆ ಭಾರತ ವಿರುದ್ಧ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ನೀಡಲು ತಮ್ಮನ್ನು ಆಹ್ವಾನಿಸದಿದ್ದಕ್ಕಾಗಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಸುನಿಲ್ ಗವಾಸ್ಕರ್, 'ನಾನು ಭಾರತೀಯನಾಗಿದ್ದರಿಂದಲೇ ಈ ರೀತಿ ಅಪಮಾನ ಮಾಡಿದ್ದಾರೆ. ನಿಸ್ಸಂಶಯವಾಗಿ ನಾನು ಟ್ರೋಫಿ ನೀಡಲು ಇಷ್ಟಪಡುತ್ತಿದ್ದೆ. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ. ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಸಂಬಂಧಿಸಿದ್ದು’ ಎಂದು ಗವಾಸ್ಕರ್ ಹೇಳಿದ್ದಾರೆ.
‘ನಾನು ಮೈದಾನದಲ್ಲಿದ್ದೆ. ಇಲ್ಲಿ ಆಸ್ಟ್ರೇಲಿಯಾ ಗೆದ್ದಿರುವುದು ನನಗೆ ಮುಖ್ಯವಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದರು, ಆದ್ದರಿಂದ ಅವರು ಗೆದ್ದರು. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ನೀಡಲು ನಾನು ಸಂತೋಷಪಡುತ್ತೇನೆ’ ಎಂದು ಹೇಳಿದರು.
Advertisement