IPL 2025: ಪಂಜಾಬ್ ಕಿಂಗ್ಸ್ ನಾಯಕನಾಗಿ ಸ್ಟಾರ್ ಆಟಗಾರ ಆಯ್ಕೆ; ನಟ ಸಲ್ಮಾನ್ ಖಾನ್ ಘೋಷಣೆ!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ನೇಮಿಸಲಾಗಿದೆ. ಐಪಿಎಲ್ 2025ರ ಹರಾಜಿನಲ್ಲಿ ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತು ಮತ್ತು ಲೀಗ್‌ ಇತಿಹಾಸದಲ್ಲಿಯೇ ಅವರು ಎರಡನೇ ಅತ್ಯಂತ ದುಬಾರಿ ಆಟಗಾರರಾದರು. ಶ್ರೇಯಸ್ ಅಯ್ಯರ್ ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಮುನ್ನಡೆಸಿದ್ದರು. ಕೆಕೆಆರ್ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, ಕೆಕೆಆರ್ ಶ್ರೇಯಸ್ ಅವರನ್ನು ಕೈಬಿಟ್ಟಿತ್ತು. ಇದರಿಂದ ಹರಾಜಿನಲ್ಲಿ ಶ್ರೇಯಸ್ ಅವರನ್ನು ಖರೀದಿಸಲು ಹಲವಾರು ತಂಡಗಳು ಬಿಡ್ಡಿಂಗ್‌ನಲ್ಲಿ ತೊಡಗಿದ್ದವು. ಅಂತಿಮವಾಗಿ ದೊಡ್ಡ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡ ಅವರನ್ನು ಖರೀದಿಸಿತು.

ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯ ಹುಡುಕಾಟದಲ್ಲಿರುವ ಪಂಜಾಬ್, ಶ್ರೇಯಸ್ ಅಯ್ಯರ್ ಅವರನ್ನೇ ತಂಡದ ನಾಯಕನನ್ನಾಗಿ ನೇಮಿಸಿದೆ. ಹಿಂದಿಯ 'ಬಿಗ್ ಬಾಸ್' ರಿಯಾಲಿಟಿ ಶೋ ನಡೆಸಿಕೊಡುವ ಸಂದರ್ಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಘೋಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಯುಜ್ವೇಂದ್ರ ಚಾಹಲ್ ಮತ್ತು ಶಶಾಂಕ್ ಸಿಂಗ್ ಅವರೊಂದಿಗೆ ಶ್ರೇಯಸ್ ಅಯ್ಯರ್ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ 30 ವರ್ಷದ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್‌ಗೆ ಕೃತಜ್ಞತೆ ಸಲ್ಲಿಸಿದರು. 'ತಂಡವು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದಗಳು. ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಸಂಭಾವ್ಯ ಮತ್ತು ಉತ್ತಮ ಪ್ರದರ್ಶನ ನೀಡಿರುವ ಆಟಗಾರರೊಂದಿಗೆ ತಂಡವು ಬಲವಾಗಿ ಕಾಣುತ್ತದೆ. ತಂಡ ನನ್ನ ಮೇಲಿಟ್ಟಿರುವ ನಂಬಿಕೆಗೆ ಪ್ರತಿಯಾಗಿ ಚಾಂಪಿಯನ್ ಪಟ್ಟವನ್ನು ಗಳಿಸಲು ಪ್ರಯತ್ನಿಸುತ್ತೇನೆ' ಎಂದಿದ್ದಾರೆ.

ಸಲ್ಮಾನ್ ಖಾನ್
IPL Mega Auction 2025: 27 ಕೋಟಿಗೆ ಪಂತ್, ಶ್ರೇಯಸ್ ಅಯ್ಯರ್ 26.75 ಕೋಟಿ ಸೋಲ್ಡ್; ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ!

ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಾತನಾಡಿ, 'ಶ್ರೇಯಸ್ ಅವರಿಗೆ ಆಟದ ಬಗ್ಗೆ ಉತ್ತಮ ಜ್ಞಾನವಿದೆ. ನಾಯಕನಾಗಿ ಅವರು ಈಗಾಗಲೇ ಸಾಧಿಸಿರುವುದು ತಂಡವನ್ನು ಮುನ್ನಡೆಸಲು ನೆರವಾಗುತ್ತದೆ. ನಾನು ಐಪಿಎಲ್‌ನಲ್ಲಿ ಈ ಹಿಂದೆ ಅಯ್ಯರ್ ಅವರೊಂದಿಗೆ ಸಮಯ ಕಳೆದಿದ್ದೇನೆ. ನಾನು ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವ ಮತ್ತು ತಂಡದಲ್ಲಿನ ಪ್ರತಿಭೆಯೊಂದಿಗೆ, ಮುಂಬರುವ ಆವೃತ್ತಿಯ ಬಗ್ಗೆ ನಾನು ಉತ್ಸುಕನಾಗಿದ್ದೇನೆ' ಎಂದರು.

ಶ್ರೇಯಸ್ ಅಯ್ಯರ್ ಒಟ್ಟು ಐಪಿಎಲ್ ಆವೃತ್ತಿಗಳಲ್ಲಿ 31.67 ರ ಸರಾಸರಿಯಲ್ಲಿ 123.96 ಸ್ಟ್ರೈಕ್ ರೇಟ್‌ನೊಂದಿಗೆ 2,375 ರನ್ ಗಳಿಸಿದ್ದಾರೆ. 16 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 96 ಆಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕಾಗಿ ಕೊನೆಯ ಆವೃತ್ತಿಯಲ್ಲಿ ಆಡಿದ 15 ಪಂದ್ಯಗಳಲ್ಲಿ 39.00 ಸರಾಸರಿಯಲ್ಲಿ 351 ರನ್ ಗಳಿಸಿದ್ದಾರೆ ಮತ್ತು 146 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಎರಡು ಅರ್ಧಶತಕಗಳು ಅವರ ಹೆಸರಿಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com