
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ಭಾರತ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ತೀರ್ಮಾನಿಸಿದೆ. ಹೀಗಾಗಿ ದುಬೈನಲ್ಲಿ ಪಂದ್ಯಗಳು ನಡೆಯಲಿವೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಹೀಗಿದ್ದರೂ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಭಾರತ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಎಂಟು ವರ್ಷಗಳ ಬಳಿಕ ಮತ್ತೆ ನಡೆಯುತ್ತಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತಂಡದ ನಾಯಕ ಆತಿಥೇಯ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಾಂಪಿಯನ್ಸ್ ಟ್ರೋಫಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತಿದ್ದು, ತಾತ್ಕಾಲಿಕವಾಗಿ ಫೆಬ್ರುವರಿ 16 ಅಥವಾ 17 ರಂದು ಅಭ್ಯಾಸ ಪಂದ್ಯದ ದಿನವನ್ನು ನಿಗದಿಪಡಿಸಲಾಗಿದೆ. ಐಸಿಸಿ ಕಾರ್ಯಕ್ರಮಗಳಿಗೆ ಎಲ್ಲ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಾಗಿರುತ್ತದೆ.
ಬರೋಬ್ಬರಿ 29 ವರ್ಷಗಳ ನಂತರ ಮೆಗಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಪಿಸಿಬಿ ಮತ್ತೆ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರುವರಿ 19 ರಂದು ಚಾಂಪಿಯನ್ಸ್ ಟ್ರೋಫಿ 2025 ಆರಂಭವಾಗಲಿದೆ. 1996ರ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾದ ಜೊತೆಗೂಡಿ ಆಯೋಜಿಸಿದ ನಂತರ ಪಾಕಿಸ್ತಾನ ಆತಿಥ್ಯ ವಹಿಸಿರುವ ಮೊದಲ ಪ್ರಮುಖ ಐಸಿಸಿ ಟೂರ್ನಿ ಇದಾಗಿದೆ.
ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪಾಕಿಸ್ತಾನವು ಹೆಚ್ಚಿನ ಪಂದ್ಯಗಳನ್ನು ಆಯೋಜಿಸಲಿದೆ. ಆದರೆ, ಭಾರತದ ಎಲ್ಲ ಗುಂಪು ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ದುಬೈನಲ್ಲಿ ನಡೆಯಲಿದೆ.
ಭಾರತ ಫೈನಲ್‌ಗೆ ಅರ್ಹತೆ ಪಡೆದರೆ, ಆ ಪಂದ್ಯವನ್ನು ದುಬೈನಲ್ಲಿಯೇ ಆಡಲಾಗುತ್ತದೆ. ಇಲ್ಲದಿದ್ದರೆ, ಲಾಹೋರ್‌ನಲ್ಲಿ ಚಾಂಪಿಯನ್‌ಶಿಪ್ ಪಂದ್ಯ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನದ ಜೊತೆಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ.
ಆತಿಥೇಯ ಪಾಕಿಸ್ತಾನವು ಕರಾಚಿಯಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸುವುದರೊಂದಿಗೆ ಪಂದ್ಯಾವಳಿ ಆರಂಭವಾಗಲಿದೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಮುಖಾಮುಖಿಯು ಫೆಬ್ರುವರಿ 23 ರಂದು ದುಬೈನಲ್ಲಿ ನಡೆಯಲಿದೆ.
ಉಭಯ ರಾಷ್ಟ್ರಗಳ ಹದಗೆಟ್ಟ ರಾಜಕೀಯ ಸಂಬಂಧಗಳಿಂದಾಗಿ, ಭಾರತ ಮತ್ತು ಪಾಕಿಸ್ತಾನವು ವಿಶ್ವಕಪ್ ಮತ್ತು ಏಷ್ಯಾ ಕಪ್‌ನಂತಹ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಸ್ಪರ್ಧಿಸುತ್ತವೆ. ಈ ಎರಡು ತಂಡಗಳು ಕೊನೆಯದಾಗಿ ನ್ಯೂಯಾರ್ಕ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದವು.
Advertisement