
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಅದರ ಪರಿಣಾಮ ಕ್ರಿಕೆಟ್ ನಲ್ಲೂ ಆಗುತ್ತಿದ್ದು, ಮೈದಾನದಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಲಿಟನ್ ದಾಸ್ ಗೆ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಅಪಮಾನ ಮಾಡಿದ್ದಾರೆ.
ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಢಾಕಾ ಕ್ಯಾಪಿಟಲ್ಸ್ Vs ಫಾರ್ಚೂನ್ ಬಾರಿಶಾಲ್ ನಡುವಿನ ಪಂದ್ಯದ ಸಮಯದಲ್ಲಿ ನಡೆದಿದೆ. ಪಂದ್ಯದ ವೇಳೆ ಬಾಂಗ್ಲಾದೇಶದ ಪ್ರಮುಖ ಬೌಲರ್ ಲಿಟನ್ ದಾಸ್ ಗೆ ಕ್ರಿಕೆಟ್ ಅಭಿಮಾನಿಗಳು ಮೈದಾನದಲ್ಲೇ ಅಪಹಾಸ್ಯ ಮಾಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಲಿಟನ್ ದಾಸ್ ಹಿಂದೂ ಎಂಬ ಕಾರಣಕ್ಕೇ ಮೈದಾನದಲ್ಲಿದ್ದ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಅವರನ್ನು ಅಪಮಾನಿಸಿದ್ದಾರೆ. ಲಿಟ್ಟನ್ ದಾಸ್ ಬೌಂಡರಿಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಅವರ ಕಡೆಗೆ ಬೆರಳು ತೋರಿಸುತ್ತಾ "ವುಹ್ವಾ..ವುಹ್ವಾ.. (ನಕಲಿ, ನಕಲಿ)" ಎಂದು ಕೂಗಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಲಿಟನ್ ದಾಸ್ ಏನನ್ನೂ ಹೇಳಲಿಲ್ಲ, ಆದರೆ ಅವರು ಉದ್ರಿಕ್ತ ಅಭಿಮಾನಿಗಳನ್ನು ನೋಡುತ್ತಲೇ ಇದ್ದರು. ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಿಟನ್ ದಾಸ್ ಬೆಂಬಲಕ್ಕೆ ನಿಂತ ಢಾಕಾ ಕ್ಯಾಪಿಟಲ್ಸ್
ಇನ್ನು ತಮ್ಮ ತಂಡದ ಆಟಗಾರನಿಗೆ ಅಭಿಮಾನಿಗಳು ಅಪಮಾನ ಮಾಡಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇದೀಗ ಅವರು ಪ್ರತಿನಿಧಿಸುವ ಢಾಕಾ ಕ್ಯಾಪಿಟಲ್ಸ್ ತಂಡ ಅವರ ಬೆನ್ನಿಗೆ ನಿಂತಿದೆ. ಈ ಕುರಿತು ಟ್ವೀಟ್ ಮಾಡಿರುವ ಢಾಕಾ ಕ್ಯಾಪಿಟಲ್ಸ್, 'ರಾಷ್ಟ್ರೀಯ ನಾಯಕ ಬಿಪಿಎಲ್ ಇತಿಹಾಸದಲ್ಲಿ ವೇಗದ ಶತಕವನ್ನು ಬಾರಿಸುವುದನ್ನು ಮತ್ತು ದಾಖಲೆಯ ಜೊತೆಯಾಟದಲ್ಲಿ ಭಾಗವಾಗಿರುವುದನ್ನು ನಾವು ನೋಡಿದ್ದೇವೆ" ಎಂದು ಢಾಕಾ ಕ್ಯಾಪಿಟಲ್ಸ್ ತನ್ನ ಖಾತೆಯಲ್ಲಿ ಬರೆದಿದೆ.
ಅಂತೆಯೇ "ನೀವು ಟೀಕೆಗಳನ್ನು ನೋಡಿದ್ದರೆ.. ನಾವು ಬಾಂಗ್ಲಾದೇಶದ ಅತ್ಯಧಿಕ ವೈಯಕ್ತಿಕ ಏಕದಿನ ಸ್ಕೋರರ್ ಮತ್ತು ದೇಶದ ಅತ್ಯುತ್ತಮ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕವನ್ನು ಹೊಂದಿರುವ ಸ್ಟಾರ್ ಬ್ಯಾಟರ್ ಅನ್ನು ನೋಡುತ್ತಿದ್ದೇವೆ. ನೀವು ಅಡೆತಡೆಗಳನ್ನು ನೋಡುತ್ತೀರಿ; ಇತಿಹಾಸ ಸೃಷ್ಟಿಯಾಗುವುದನ್ನು ನಾವು ನೋಡುತ್ತಿದ್ದೇವೆ. ಲಿಟ್ಟನ್, ನೀವು ನಮ್ಮ ಪ್ರೀತಿಯ ಸಂಕೇತ. ನೀವು ನಮ್ಮ ಹೆಮ್ಮೆ, ”ಎಂದು ಟ್ವೀಟ್ ಮಾಡಿದೆ.
ಧನ್ಯವಾದ ಹೇಳಿದ ಲಿಟನ್ ದಾಸ್
ಇನ್ನು ಢಾಕಾ ಕ್ಯಾಪಿಟಲ್ಸ್ ತಂಡದ ಬೆಂಬಲಕ್ಕೆ ಧನ್ಯವಾದ ಹೇಳಿರುವ ಲಿಟನ್ ದಾಸ್, 'ನನ್ನ ತಂಡವಾದ ಢಾಕಾ ಕ್ಯಾಪಿಟಲ್ಸ್‌ನ ಈ ಅದ್ಭುತ ಕಾರ್ಯದಿಂದ ನಿಜವಾಗಿಯೂ ನನ್ನ ಹೃದಯ ತುಂಬಿದೆ. ಪ್ರತಿ ಎತ್ತರ ಮತ್ತು ಕೆಳಮಟ್ಟದಲ್ಲಿ ನನ್ನನ್ನು ಮತ್ತು ಎಲ್ಲಾ ಕ್ರೀಡಾಪಟುಗಳನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ನಂಬಿಕೆ ನಮಗೆ ಜಗತ್ತನ್ನು ಅರ್ಥೈಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement