
ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ತೀವ್ರ ಮುಖಭಂಗಕ್ಕೀಡಾಗಿದ್ದು, 2ನೇ ಟೆಸ್ಟ್ ಪಂದ್ಯದಲ್ಲಿ 120ರನ್ ಗಳ ಹೀನಾಯ ಸೋಲು ಕಂಡಿದೆ.
ಹೌದು.. ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತನ್ನ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 133 ರನ್ ಗಳಿಗೆ ಆಲೌಟ್ ಆಗುವ ಮೂಲಕ 120ರನ್ ಗಳ ಅಂತರದ ಹೀನಾಯ ಸೋಲು ಕಂಡಿತು. ಆ ಮೂಲಕ ಹಾಲಿ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಜೊಮೆಲ್ ವಾರಿಕನ್ ಮಾರಕ ಬೌಲಿಂಗ್
ವೆಸ್ಟ್ ಇಂಡೀಸ್ ನೀಡಿದ 253ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ವಿಂಡೀಸ್ ಸ್ಪಿನ್ನರ್ ಜೊಮೆಲ್ ವಾರಿಕನ್ ಮಾರಕ ಬೌಲಿಂಗ್ ಗೆ ತತ್ತರಿಸಿತು. ವಾರಿಕನ್ ಕೇವಲ 27ರನ್ ನೀಡಿ ಐದು ಪ್ರಮುಖ ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಪಾಕ್ ಪರ ಮಹಮದ್ ರಿಜ್ವಾನ್ 25ರನ್ ಗಳಿಸಿದರೆ, ಮಾಜಿ ನಾಯಕ ಬಾಬರ್ ಆಜಂ 31 ರನ್ ಗಳಿಸಿದರು.
ಒಂದು ಹಂತದಲ್ಲಿ 76ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ 254 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಲಿದೆ ಎಂದು ಊಹಿಸಲಾಗಿತ್ತು. ಪಾಕಿಸ್ತಾನದ ಗೆಲುವಿನ ಭರವಸೆ ಸೌದ್ ಶಕೀಲ್ ಮೇಲೆ ಇತ್ತು. ಆದರೆ ವಿಂಡೀಸ್ ಬೌಲರ್ ಕೆವಿನ್ ಸಿಂಕ್ಲೇರ್ ಶಕೀಲ್ ರನ್ನು ಕೇವಲ 13 ರನ್‌ಗಳಿಗೆ ಔಟ್ ಮಾಡಿ ಮರ್ಮಾಘಾತ ನೀಡಿದರು. ಇದು ಪಾಕಿಸ್ತಾನಕ್ಕೆ ಮತ್ತೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು.
35 ವರ್ಷಗಳಲ್ಲಿ ತವರಿನಲ್ಲಿ ಪಾಕ್ ಗೆ ಮೊದಲ ಸೋಲು
ಇನ್ನು ಈ ಸೋಲು ತವರು ಮೈದಾನದಲ್ಲಿ ಪಾಕಿಸ್ತಾನ ತಂಡಕ್ಕೆ ಕಳೆದ 35 ವರ್ಷಗಳಲ್ಲಿ ವಿಂಡೀಸ್ ವಿರುದ್ಧ ಸಿಕ್ಕ ಮೊದಲ ಸೋಲಾಗಿದೆ. 1990 ರ ನವೆಂಬರ್‌ನಲ್ಲಿ ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ಟೆಸ್ಟ್ ಗೆದ್ದಿತ್ತು, 1997 ಮತ್ತು 2006 ರ ಪ್ರವಾಸಗಳಲ್ಲಿ ಯಾವುದೇ ಗೆಲುವು ಸಾಧಿಸಿರಲಿಲ್ಲ.
Advertisement