
ಮುಲ್ತಾನ್: ಟೆಸ್ಟ್ ಪಂದ್ಯದ ಸೋಲಿನ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧ ವೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ Shan Masood ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಹೌದು.. ವೆಸ್ಟ್ ಇಂಡೀಸ್ ವಿರುದ್ಧ ಬರೊಬ್ಬರಿ 35 ವರ್ಷಗಳ ಬಳಿಕ ತವರಿನಲ್ಲೇ ಟೆಸ್ಟ್ ಪಂದ್ಯ ಸೋತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಟೆಸ್ಟ್ ಪಂದ್ಯ ಸೋತಿದ್ದು ಮಾತ್ರವಲ್ಲದೇ ತನ್ನ ಕಳಪೆ ಪ್ರದರ್ಶನದಿಂದಾಗಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲೂ ಕೊನೆ ಸ್ಥಾನಕ್ಕೆ ಜಾರಿದೆ.
ವೆಸ್ಟ್ ಇಂಡೀಸ್ ತಂಡದ ವಿರುದ್ಧ ತವರಿನಲ್ಲೇ ಸೋತಿರುವುದು ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಪಾಕಿಸ್ತಾನದ ಪತ್ರಕರ್ತರಿಗೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇದೇ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾನ್ ಮಸೂದ್ ಬಳಿ ಅಸಂಬಂದ್ಧ ಪ್ರಶ್ನೆ ಕೇಳಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಇಂದು ಮುಲ್ತಾನ್ ನಲ್ಲಿ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ 120ರನ್ ಗಳ ಹೀನಾಯ ಸೋಲುಕಂಡಿತು. ಆ ಮೂಲಕ ಬರೊಬ್ಬರಿ 35 ವರ್ಷಗಳ ಬಳಿಕ ವಿಂಡೀಸ್ ವಿರುದ್ಧ ತವರಿನಲ್ಲೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಸೋತ ಹೀನಾಯ ದಾಖಲೆ ಬರೆದಿದೆ. ಈ ವಿಚಾರವಾಗಿ ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾನ್ ಮಸೂದ್ ಗರಂ ಆಗಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಸುದ್ದಿಗೋಷ್ಠಿ ವೇಳೆ ಪಾಕಿಸ್ತಾನದ ಪತ್ರಕರ್ತರೊಬ್ಬರು 'ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ವಿಚಾರಗಳನ್ನು ಕಾಂಪ್ರಮೈಸ್ ಮಾಡಿಕೊಳ್ಳಲಾಗುತ್ತಿದೆ. ಅದರ ಫಲವನ್ನು ಈಗ ಅನುಭವಿಸಲಾಗುತ್ತಿದೆ. ಮೊದಲ ಟೆಸ್ಟ್ ಚಾಂಪಿಯನ್ ಶಿಪ್ ವೇಳೆ ನಾವು 6ನೇ ಸ್ಥಾನದಲ್ಲಿದ್ದೆವು. 2ನೇ ಟೆಸ್ಟ್ ಚಾಂಪಿಯನ್ ಷಿಪ್ ವೇಳೆ ನಾವು 7ನೇ ಸ್ಥಾನಕ್ಕೆ ಕುಸಿದಿದ್ದೆವು. ಈಗ 3ನೇ ಟೆಸ್ಟ್ ಚಾಂಪಿಯನ್ ಷಿಪ್ ವೇಳೆ ಕೊನೆಯ ಸ್ಥಾನಕ್ಕೆ ಕುಸಿದಿದ್ದೇವೆ. ನಿಮ್ಮ ನಿರ್ಧಾರವನ್ನು ನೀವೇ ಮಾಡುತ್ತೀರಾ? ಅಥವಾ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಾಡುತ್ತಾ? ಎಂದು ಶಾನ್ ಮಸೂದ್ ನಾಯಕ ಸ್ಥಾನ ತೊರೆಯುವ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾನ್ ಮಸೂದ್ ಗರಂ ಆಗಿ ಮುಂದಿನ ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ. ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತ್ರಕರ್ತ ನೀವು ಹೀಗೆ ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.
ಮೊದಲು ಗೌರವ ಕೊಟ್ಟು ಮಾತನಾಡೋದು ಕಲೀರಿ
ಸುದ್ದಿಗಾರನ ಪ್ರಶ್ನೆಗೆ ಉತ್ತರಿಸಿದ ಶಾನ್ ಮಸೂದ್, 'ನಿಮ್ಮ ಅಭಿಪ್ರಾಯ ನಿಮಗಿದೆ ಮತ್ತು ನಾನು ಅದನ್ನು ಗೌರವಿಸುತ್ತೇನೆ. ಆದರೆ ನಿಮ್ಮ ಪ್ರಶ್ನೆಯಲ್ಲಿ ಬಹಳಷ್ಟು ಅಗೌರವವಿದೆ. ನೀವು ಆಟಗಾರರಿಗೆ, ನನಗೆ ಮತ್ತು ಇತರರಿಗೆ ಅಗೌರವ ತೋರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಪಾಕಿಸ್ತಾನಕ್ಕಾಗಿ ಆಡುತ್ತಿದ್ದೇವೆ ಮತ್ತು ಫಲಿತಾಂಶಗಳನ್ನು ಪಡೆಯುತ್ತೇವೆ. ಆದರೆ ಯಾರೂ ಅಂತಹ ಅಗೌರವವನ್ನು ಸಹಿಸುವುದಿಲ್ಲ. ನೀವು ಅದನ್ನು ಅರ್ಥಮಾಡಿಕೊಳ್ಳಬೇಕು. ನೀವು ಯಾರನ್ನಾದರೂ ಕೀಳಾಗಿ ಕಾಣಲು ಬಯಸುತ್ತೀರಿ. ಆದರೆ ನಾವೆಲ್ಲರೂ ಪಾಕಿಸ್ತಾನಿ ಆಟಗಾರರು. ನಾವು ವಿಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಪ್ರಶಂಸಿಸಬೇಕು ಎಂದು ಹೇಳಿದರು.
ಅಂತೆಯೇ ನೀವು ಕೆಲ ವಿಚಾರಗಳನ್ನು ಅಧ್ಯಯನ ಮಾಡಬೇಕು. ಈಗ ಎಲ್ಲ ಮಾಹಿತಿಗಳೂ ಕೈಬೆರಳ ತುದಿಯಲ್ಲೇ ಸಿಗುತ್ತದೆ. ಯಾರಾದರೂ ಏನನ್ನಾದರೂ ಗೂಗಲ್ ಮಾಡಬಹುದು. ಆದರೆ ನಾವು ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ತವರಿನಲ್ಲಿ ಕಳೆದ ನಾಲ್ಕು ಟೆಸ್ಟ್‌ಗಳಲ್ಲಿ ಮೂರನ್ನು ಗೆದ್ದಿದ್ದೇವೆ. ಗೆದ್ದ ಮೂರು ಟೆಸ್ಟ್ ಗಳನ್ನು ಬಿಟ್ಟು ಸೋತ ಒಂದು ಟೆಸ್ಟ್ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಪ್ರಶ್ನೆ ತುಂಬಾ ಅಗೌರವವನ್ನು ಹೊಂದಿತ್ತು. ಇಲ್ಲಿ ಯಾರೂ ಇದನ್ನು ಸಹಿಸುವುದಿಲ್ಲ. ಕೆಲವು ಸಮಯದಿಂದ ನಾವು ಕೆಳ ಕ್ರಮಾಂಕವನ್ನು ತ್ವರಿತವಾಗಿ ಔಟ್ ಮಾಡಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ಇದನ್ನು ಪರಿಹರಿಸಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಟೆಸ್ಟ್‌ಗಳಲ್ಲಿ ನೀವು ತಂಡವಾಗಿ ನಿಮಗೆ ಬರುವ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
Advertisement