
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಕ್ತಾಯವಾಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಮರ್ಮಾಘಾತ ಅನುಭವಿಸಿದೆ.
ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ 3 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ. ಅಂತೆಯೇ ಇಂಗ್ಲೆಂಡ್ ಇನ್ನೂ 510 ರನ್ ಗಳ ಬೃಹತ್ ಹಿನ್ನಡೆಯಲ್ಲಿದೆ.
587 ರನ್ ಗೆ ಭಾರತ ಆಲೌಟ್
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮ್ಯಾರಥಾನ್ ಆಟ 587 ರನ್ ಗಳಿಗೇ ಸೀಮಿತವಾಯಿತು. ಭಾರತ 587 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಯಶಸ್ವಿ ಜೈಸ್ವಾಲ್ 87, ಕರುಣ್ ನಾಯರ್ 31, ರವೀಂದ್ರ ಜಡೇಜಾ 89, ವಾಷಿಂಗ್ಟನ್ ಸುಂದರ್ 42 ರನ್ ಮತ್ತು ನಾಯಕ ಶುಭ್ ಮನ್ ಗಿಲ್ 269 ರನ್ ಗಳಿಸಿದರು. ಈ ಪೈಕಿ 387 ಎಸೆತಗಳನ್ನು ಎದುರಿಸಿರುವ ಗಿಲ್ 3 ಸಿಕ್ಸರ್ ಮತ್ತು 30 ಬೌಂಡರಿಗಳ ಸಹಿತ 269 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ಪರ ಶೊಯೆಬ್ ಬಷೀರ್ 3 ವಿಕೆಟ್ ಕಬಳಿಸಿದರೆ, ಕ್ರಿಸ್ ವೋಕ್ಸ್, ಜಾಷ್ ಟಂಗ್ ತಲಾ 2 ವಿಕೆಟ್ ಪಡೆದರು. ಅಂತೆಯೇ ಬ್ರಿಡನ್ ಕರ್ಸ್, ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ಗೆ ಆರಂಭಿಕ ಆಘಾತ
ಇನ್ನು ಭಾರತ ನೀಡಿದ 587 ರನ್ ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 25 ರನ್ ಗಳಿಗೇ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಬೆನ್ ಡಕೆಟ್ ರನ್ನು ಶೂನ್ಯಕ್ಕೆ ಆಕಾಶ್ ದೀಪ್ ಔಟ್ ಮಾಡಿದರು.
ನಂತರದ ಎಸೆತದಲ್ಲೇ ಒಲ್ಲಿ ಪೋಪ್ ಕೂಡ ಶೂನ್ಯ ಸುತ್ತಿ ಆಕಾಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಜಾಕ್ ಕ್ರಾಲಿ ಕೂಡ 19 ರನ್ ಗಳಿಸಿ ಮಹಮದ್ ಸಿರಾಜ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
Advertisement