
ಎಡ್ಜ್ ಬ್ಯಾಸ್ಟನ್: ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಮತ್ತೊಂದು ಅಪರೂಪದ ದಾಖಲೆಗೆ ಪಾತ್ರವಾಗಿದ್ದು, ಈ ಬಾರಿ 29 ವರ್ಷಗಳ ಹಳೆಯ ಅಪರೂಪದ ದಾಖಲೆ ಪತನವಾಗಿದೆ.
ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 29 ವರ್ಷಗಳ ಹಳೆಯ ದಾಖಲೆಯೊಂದು ಪತನವಾಗಿದೆ. ಈ ಪಂದ್ಯದಲ್ಲಿ ಭಾರತ ನೀಡಿದ್ದ 587 ರನ್ ಮೊದಲ ಇನ್ನಿಂಗ್ಸ್ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್ ಗಳಿಗೇ ಆಲೌಟ್ ಆಗಿದೆ. ಆ ಮೂಲಕ 180 ರನ್ ಗಳ ಬೃಹತ್ ಹಿನ್ನಡೆ ಅನುಭವಿಸಿತು.
2 ಶತಕ, 300 ರನ್ ಜೊತೆಯಾಟ..
ಒಂದು ಹಂತದಲ್ಲಿ ಕೇವಲ 84 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಹ್ಯಾರಿ ಬ್ರೂಕ್ (158 ರನ್) ಮತ್ತು ಜೇಮಿ ಸ್ಮಿತ್ (184 ರನ್) ಅತ್ತ್ಯುತ್ತಮ ಜೊತೆಯಾಟ ನೀಡಿದರು. ಈ ಜೋಡಿ ಬರೊಬ್ಬರಿ 300 ರನ್ ಗಳ ಜೊತೆಯಾಟವಾಡಿ ಇಂಗ್ಲೆಂಡ್ ತಂಡವನ್ನು ಫಾಲೋಆನ್ ಸಂಕಷ್ಟದಿಂದ ಪಾರು ಮಾಡಿತು.
158ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಆಕಾಶ್ ದೀಪ್ ಗೆ ವಿಕೆಟ್ ಒಪ್ಪಿಸುತ್ತಲೇ ಇತ್ತ ಮತ್ತೆ ಇಂಗ್ಲೆಂಡ್ ಪೆವಿಲಿಯನ್ ಪರೇಡ್ ಆರಂಭವಾಯಿತು. ಬ್ರೂಕ್ ಬಳಿಕ ಬಂದ ಕ್ರಿಸ್ ವೋಕ್ಸ್ 5 ರನ್ ಗಳಿಸಿದ್ದು ಬಿಟ್ಟರೆ ನಾಯಕ ಬೆನ್ ಸ್ಟೋಕ್ಸ್ ಸಹಿತ 4 ಆಟಗಾರರು ಶೂನ್ಯ ಸುತ್ತಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 407 ರನ್ ಗೆ ಆಲೌಟ್ ಆಯಿತು.
ನಾಟಕೀಯ ತಿರುವು; 29 ವರ್ಷಗಳ ದಾಖಲೆ ಪತನ
ಇನ್ನು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 6 ಮಂದಿ ಬ್ಯಾಟರ್ ಗಳು ಡಕೌಟ್ ಆಗಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಪರೂಪದ ಹೀನಾಯ ದಾಖಲೆಯಾಗಿದೆ. ಇನ್ನಿಂಗ್ಸ್ ನಲ್ಲಿ 300ಕ್ಕೂ ಅಧಿಕ ಜೊತೆಯಾಟ ಬಂದ ಬಳಿಕ 450ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು ಕ್ರಿಕೆಟ್ ಇತಿಹಾದಲ್ಲಿ ಇದು 2ನೇ ಬಾರಿ.
ಈ ಹಿಂದೆ 1999ರಲ್ಲಿ ಕಿಂಗ್‌ಸ್ಟನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಕೂಡ 431 ರನ್ ಗಳಿಗೆ ಆಲೌಟ್ ಆಗಿತ್ತು. ಅಂದಿನ ಪಂದ್ಯದಲ್ಲಿ ಬ್ರಿಯಾನ್ ಲಾರಾ (213 ರನ್) ಮತ್ತು ಜಿಮ್ಮಿ ಆ್ಯಡಮ್ಸ್ (94) ನಡುವೆ 300 ರನ್ ಗಳ ಜೊತೆಯಾಟ ಹರಿದುಬಂದಿತ್ತು.
6 ಮಂದಿ ಡಕೌಟ್!
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ನ ಇಬ್ಬರು ಬ್ಯಾಟರ್ ಗಳು ಶತಕಗಳನ್ನು ಸಿಡಿಸಿಯೂ 6 ಮಂದಿ ಬ್ಯಾಟರ್ ಗಳು ಡಕೌಟ್ ಆಗಿದ್ದಾರೆ. ಆರಂಭಿಕ ಆಟಗಾರ ಬೆನ್ ಡಕೆಟ್, ಒಲ್ಲಿಪೋಪ್, ನಾಯಕ ಬೆನ್ ಸ್ಟೋಕ್ಸ್, ಬ್ರೈಡನ್ ಕಾರ್ಸ್, ಜಾಶ್ ಟಂಗ್ ಮತ್ತು ಶೊಯೆಬ್ ಬಷೀರ್ ಶೂನ್ಯ ಸುತ್ತಿದರು. ಅಂತೆಯೇ ಈ ಆರು ಮಂದಿಯ ಹೊರತಾಗಿ ಆರಂಭಿಕ ಆಟಗಾರ ಜಾಕ್ ಕ್ರಾಲಿ 19 ರನ್, ರೂಟ್ 22 ರನ್ ಮತ್ತು ಕ್ರಿಸ್ ವೋಕ್ಸ್ 5 ರನ್ ಮಾತ್ರ ಗಳಿಸಿ ನಿರಾಶೆ ಮೂಡಿಸಿದರು.
Advertisement