
ಭಾನುವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ನಂತರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಶುಭಮನ್ ಗಿಲ್ ನೇತೃತ್ವದ ತಂಡ ಇಂಗ್ಲೆಂಡ್ ಅನ್ನು 336 ರನ್‌ಗಳಿಂದ ಸೋಲಿಸುವ ಮೂಲಕ ಈ ಸ್ಥಳದಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿತು.
ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿ ಗಿಲ್ ಭಾರತವನ್ನು ಮುನ್ನಡೆಸಿದರು. ಆಕಾಶ್ ದೀಪ್ ಎರಡು ಇನಿಂಗ್ಸ್‌ಗಳಲ್ಲಿ 10 ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ಸಿರಾಜ್ 7 ವಿಕೆಟ್‌ಗಳನ್ನು ಪಡೆದರು. ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಆಸ್ಟ್ರೇಲಿಯಾ ಸದ್ಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ಎರಡನೇ ಸ್ಥಾನದಲ್ಲಿ ಮತ್ತು ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 336 ರನ್‌ಗಳ ಐತಿಹಾಸಿಕ ಗೆಲುವಿನ ನಂತರ, ಭಾರತದ ನಾಯಕ ಶುಭಮನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿಯೂ ತಂಡದ ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು. ವಿಶೇಷವಾಗಿ ವೇಗಿ ಆಕಾಶ್ ದೀಪ್ ಅವರನ್ನು ಐತಿಹಾಸಿಕ ಹತ್ತು ವಿಕೆಟ್ ಗೊಂಚಲು ಪಡೆದ ಅದ್ಭುತ ಆಟಗಾರ ಎಂದು ಬಣ್ಣಿಸಿದರು.
ಬರ್ಮಿಂಗ್ಹ್ಯಾಮ್‌ನಲ್ಲಿ ಏಳು ಸೋಲುಗಳು ಮತ್ತು ಒಂದು ಡ್ರಾ ನಂತರ ಭಾರತವು ಐತಿಹಾಸಿಕ ಗೆಲುವು ಕಂಡಿತು. 58 ವರ್ಷಗಳಲ್ಲಿ ಭಾರತವು ಈ ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದೇ ಇಲ್ಲ.
ಪಂದ್ಯದ ನಂತರ ಮಾತನಾಡಿದ ಗಿಲ್, ತಂಡವು ಸಾಕಷ್ಟು ಸುಧಾರಣೆಗಳೊಂದಿಗೆ ಉತ್ತಮವಾಗಿದೆ. ಬೌಲಿಂಗ್ ಮತ್ತು ಫೀಲ್ಡಿಂಗ್ ನೋಡಲು ಅದ್ಭುತವಾಗಿದೆ. ಈ ರೀತಿಯ ವಿಕೆಟ್‌ನಲ್ಲಿ ನಾವು 400-500 ರನ್ ಗಳಿಸಿದರೆ, ನಾವು ಆಟದಲ್ಲಿ ಇರುತ್ತೇವೆ ಎಂದು ನಮಗೆ ತಿಳಿದಿತ್ತು. ಪ್ರತಿ ಬಾರಿಯೂ ನಾವು ಕ್ಯಾಚ್‌ಗಳನ್ನು ಬಿಡುವುದಿಲ್ಲ. ಪ್ರತಿ ಪಂದ್ಯವೂ ಹೆಡಿಂಗ್ಲಿಯಂತಿರುವುದಿಲ್ಲ ಎಂದು ಹೇಳಿದರು.
ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ನಾವು ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ವಿಕೆಟ್‌ಗಳನ್ನು ಪಡೆದ ರೀತಿ ಉತ್ತಮವಾಗಿತ್ತು. ಪ್ರಸಿದ್ಧ್ ಕೃಷ್ಣ ಹೆಚ್ಚು ವಿಕೆಟ್‌ಗಳನ್ನು ಪಡೆಯಲಿಲ್ಲವಾದರೂ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದರು.
Advertisement