
ಗಾಜಿಯಾಬಾದ್ ಮೂಲದ ಮಹಿಳೆಯೊಬ್ಬರು ಮಾಡಿದ ವಂಚನೆ, ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪದ ಮೇರೆಗೆ ಉತ್ತರ ಪ್ರದೇಶ ಪೊಲೀಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರ ಯಶ್ ದಯಾಳ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವಂತೆ, 27 ವರ್ಷದ ಕ್ರಿಕೆಟಿಗನ ವಿರುದ್ಧ ಭಾನುವಾರ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಬಿಎನ್ಎಸ್) ಸೆಕ್ಷನ್ 69 (ಮದುವೆಯ ಸುಳ್ಳು ಭರವಸೆ ಸೇರಿದಂತೆ ಮೋಸದಿಂದ ಲೈಂಗಿಕ ಸಂಭೋಗ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜೂನ್ 21 ರಂದು ಐಜಿಆರ್‌ಎಸ್ (ಸಮಗ್ರ ದೂರು ಪರಿಹಾರ ವ್ಯವಸ್ಥೆ) ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಹಿಳೆ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಯಶ್ ದಯಾಳ್ ಜೊತೆಗಿನ ತಮ್ಮ ಐದು ವರ್ಷಗಳ ಸಂಬಂಧದಲ್ಲಿ ಕ್ರಿಕೆಟಿಗನಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಶೋಷಣೆಗೊಳಗಾಗಿದ್ದೇನೆ ಮತ್ತು ಆ ಸಮಯದಲ್ಲಿ ಅವರ ಕುಟುಂಬವು ತನಗೆ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಆರೋಪಿಸಿದ್ದಾರೆ.
ಯಶ್ ದಯಾಳ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಎನ್‌ಡಿಟಿವಿಗೆ ಲಭ್ಯವಾಗಿದೆ.
'ಕಳೆದ 5 ವರ್ಷಗಳಿಂದ ನಾನು ಅವರ ಜೊತೆ ಸಂಬಂಧ ಹೊಂದಿದ್ದೆ. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ನನ್ನ ಜೊತೆ ದೈಹಿಕ ಸಂಬಂಧ ಹೊಂದಿದ್ದರು. ಅವರ ಕುಟುಂಬಕ್ಕೂ ನನ್ನನ್ನು ಪರಿಚಯಿಸಿದರು ಮತ್ತು ಅವರು ಕೂಡ ನನ್ನನ್ನು ಅವರ ಸೊಸೆಯಂತೆ ನಡೆಸಿಕೊಂಡರು. ಆದರೆ, ಸತ್ಯವೆಂದರೆ ಆತ ಈ ಸಂಬಂಧವನ್ನು ಕೇವಲ ದೈಹಿಕ ಮತ್ತು ಮಾನಸಿಕ ಶೋಷಣೆಗಾಗಿ ಬಳಸಿಕೊಂಡರು. ಇತರ ಮಹಿಳೆಯರೊಂದಿಗಿನ ಅವನ ಸಂಬಂಧದ ಬಗ್ಗೆ ನಾನು ಪ್ರಶ್ನಿಸಿದಾಗಲೆಲ್ಲಾ ನನಗೆ ದೈಹಿಕ ಹಿಂಸೆ ನೀಡಲಾಯಿತು' ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
'ಆದರೆ, ಅವರು ನನಗೆ ಕ್ಷಮೆಯಾಚಿಸಿ ಪುಸಲಾಯಿಸಿದರು. ಈ ನಡವಳಿಕೆಯಿಂದಾಗಿ ನಾನು ಮಾನಸಿಕವಾಗಿ ಕುಗ್ಗಿಹೋದೆ. ಆತ ನನ್ನ ಆತ್ಮವಿಶ್ವಾಸವನ್ನು ಮುರಿದು ನಾನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಆತನನ್ನು ಅವಲಂಬಿಸುವಂತೆ ಮಾಡಿದರು. ನಾನು ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದೆ ಮತ್ತು ಸಾಮಾನ್ಯ ಜೀವನವನ್ನು ನಡೆಸುವುದು ನನಗೆ ಕಷ್ಟಕರವಾಗಿತ್ತು. ಮಾನಸಿಕ ಹಿಂಸೆಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ನಾನು ಹಲವಾರು ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ' ಎಂದಿದ್ದಾರೆ.
ಆತ ತನ್ನ ಕುಟುಂಬದ ಎದುರು, ನಾನು ಅವನ ಹೆಂಡತಿಯಾಗುತ್ತೇನೆ ಎಂದು ಹೇಳುವ ಮೂಲಕ ನನ್ನನ್ನು ಪುಸಲಾಯಿಸುತ್ತಲೇ ಇದ್ದರು. ನನ್ನೊಂದಿಗೆ ಸಂಬಂಧ ಹೊಂದಿದ್ದರೂ, ಆತ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ನನಗೆ ತಿಳಿಯಿತು. ನಂತರ ನಾನು ಭಾವನಾತ್ಮಕವಾಗಿ ದುಃಖಿತಳಾಗಿದ್ದೆ. ನಾನು ಅದನ್ನು ದೇವರ ನ್ಯಾಯಕ್ಕೆ ಬಿಟ್ಟಿದ್ದೇನೆ. ಆದರೆ, ಸಂಪೂರ್ಣ ಸತ್ಯವನ್ನು ತಿಳಿದ ನಂತರ, ನನ್ನ ಸ್ವಾಭಿಮಾನಕ್ಕಾಗಿ ಹೋರಾಡಲು ನಿರ್ಧರಿಸಿದೆ' ಎಂದು ತಿಳಿಸಿದ್ದಾರೆ.
Advertisement