
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ 2ನೇ ದಿನದಂದು ಜೇಮ್ ಸ್ಮಿತ್ ಅವರ ವಿಕೆಟ್ ಪಡೆದ ನಂತರ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ತಮ್ಮ ಕೈ ಬೆರಳುಗಳ ಮೂಲಕ ತೋರಿಸಿದ ಸಂದೇಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಈ ಕುರಿತು ಮಾತನಾಡಿರುವ ಸಿರಾಜ್, ಲಿವರ್‌ಪೂಲ್ ಫುಟ್ ಬಾಲ್ ಆಟಗಾರ ಡಿಯೊಗೊ ಜೋಟಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ನಿಜಕ್ಕೂ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಹಾಗಾಗೀ ಅವರಿಗೆ ಮೈದಾನದಲ್ಲಿ ನಮನ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಸ್ಮಿತ್ ವಿಕೆಟ್ ಪಡೆದ ನಂತರ ಸಿರಾಜ್, ಜೋಟಾ ಅವರ ಜರ್ಸಿ ಸಂಖ್ಯೆ 20ರ ಸಂಕೇತವಾಗಿ ತನ್ನ ಬೆರಳುಗಳನ್ನು ತೋರಿಸುವ ಮೂಲಕ ಎರಡೂ ಕೈಗಳನ್ನು ಆಕಾಶಕ್ಕೆ ಎತ್ತಿ ಗೌರವ ನಮನ ಸಲ್ಲಿಸಿದ್ದರು. ಜೋಟಾ ಅವರು ತಮ್ಮ ಸಹೋದರ ಆಂಡ್ರೆ ಸಿಲ್ವಾ ಅವರೊಂದಿಗೆ ಜುಲೈ 3 ರಂದು ಸ್ಪೇನ್‌ನ ಝಮೊರಾ ಪ್ರದೇಶದಲ್ಲಿ ತರಬೇತಿಗಾಗಿ ಲಿವರ್‌ಪೂಲ್‌ಗೆ ಹಿಂದಿರುಗುತ್ತಿದ್ದಾಗ ಅಪಘಾತದಲ್ಲಿ ನಿಧನರಾದರು.
ಕಳೆದ ಟೆಸ್ಟ್ ಪಂದ್ಯದಲ್ಲಿಯೇ ಅವರಿಗೆ ಗೌರವ ಸಲ್ಲಿಸಲು ಬಯಸಿದ್ದೆ ಎಂದು ಸಿರಾಜ್ ತಿಳಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಡಿಯಾಗೊ ಜೋಟಾ ಕಾರು ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದಿತ್ತು. ನಾನು ಪೋರ್ಚಗಲ್ ಅಭಿಮಾನಿಯಾಗಿರುವುದರಿಂದ ಸಹಜವಾಗಿಯೇ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಅವರಿಗೆ ಕಳೆದ ಪಂದ್ಯದಲ್ಲಿಯೇ ಗೌರವ ಸಲ್ಲಿಸಲು ಬಯಸಿದ್ದೆ. ಈ ವಿಚಾರವನ್ನು ಕುಲದೀಪ್ ಯಾದವ್ ಜೊತೆಗೂ ಹಂಚಿಕೊಂಡಿದ್ದೆ. ಶುಕ್ರವಾರ ವಿಕೆಟ್ ಪಡೆದ ನಂತರ ಆ ರೀತಿಯ ಸಂದೇಶದ ಮೂಲಕ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.
ಜೀವನ ಎಂಬುದನ್ನು ಯಾರೂ ಊಹಿಸಿಕೊಳ್ಳಲಾಗದು. ಮುಂದೆ ಏನು ಆಗುತ್ತದೆ ಎಂಬುದನ್ನು ಯಾರಿಗೂ ಗೊತ್ತಿರುವುದಿಲ್ಲ. ಕಾರು ಅಪಘಾತದಿಂದ ಜೋಟಾ ನಿಧನದ ಸುದ್ದಿ ಕೇಳಿ ಶಾಕ್ ಆಗಿತ್ತು. ನಾನು ವಿಕೆಟ್ ಪಡೆದ ತಕ್ಷಣ ಅವರ ಜೆರ್ಸಿ ನಂಬರ್ 20 ತಲೆಗೆ ಬಂತು. ಇದೇ ಕಾರಣದಿಂದ ಮೈದಾನದಲ್ಲಿ ಆ ರೀತಿ ವರ್ತಿಸಿದ್ದಾಗಿ ಸಿರಾಜ್ ಹೇಳಿರುವ ವಿಡಿಯೋವನ್ನು ಬಿಸಿಸಿಐ ಫೋಸ್ಟ್ ಮಾಡಿದೆ.
Advertisement