
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯದ ವೇಳೆ ಲಾರ್ಡ್ಸ್ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಉದ್ದೇಶಪೂರ್ವಕವಾಗಿ ಟೈಮ್ ವೇಸ್ಟ್ ಮಾಡುತ್ತಿದ್ದ ಇಂಗ್ಲೆಂಡ್ ಬ್ಯಾಟರ್ ಜ್ಯಾಕ್ ಕ್ರಾಲಿ ವಿರುದ್ಧ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಮೈದಾನದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ದಿನದಾಟದಲ್ಲಿ ಬಾಝ್ ಬಾಲ್ ಬದಲಿಗೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಬ್ಯಾಟರ್ಗಳನ್ನು ವ್ಯಂಗ್ಯವಾಡಿ ಗಮನ ಸೆಳೆದಿದ್ದ ಗಿಲ್, ಇದೀಗ ಮೂರನೇ ದಿನದಾಟದ ಅಂತ್ಯದ ವೇಳೆ ಆಂಗ್ಲ ಬ್ಯಾಟರ್ಗಳ ಚಳಿ ಬಿಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ 387 ರನ್ಗಳಿಸಿ ಆಲೌಟ್ ಆದರೆ, ಟೀಮ್ ಇಂಡಿಯಾ ಕೂಡ 387 ರನ್ಗಳಿಸಿ ತನ್ನ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಆದರೆ ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ತಂಡದ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಜೋಡಿ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ ಸಮಯ ವ್ಯರ್ಥ ಮಾಡುವುದರಲ್ಲೇ ಮಗ್ನವಾಗಿತ್ತು.
ಇತ್ತ ಟೀಂ ಇಂಡಿಯಾದ ವೇಗಿಗಳೂ ಕೂಡ ಅಂತಿಮ ಕ್ಷಣದಲ್ಲಿ ವಿಕೆಟ್ ಪಡೆಯಬೇಕು ಎಂಬ ಉದ್ದೇಶದಿಂದ ಇಂಗ್ಲೆಂಡ್ ವೇಗಿಗಳ ವಿರುದ್ಧ ಕರಾರುವಕ್ಕಾದ ಬೌಲಿಂಗ್ ಗೆ ಮುಂದಾಗಿದ್ದರು. ಪ್ರಮುಖವಾಗಿ ವೇಗಿ ಜಸ್ ಪ್ರೀತ್ ಬುಮ್ರಾ ಮತ್ತು ಮಹಮದ್ ಸಿರಾಜ್ ತಮ್ಮ ಘಾತಕ ವೇಗದ ಮೂಲಕ ಇಂಗ್ಲೆಂಡ್ ಬ್ಯಾಟರ್ ಗಳ ಕಾಡಿದ್ದರು.
ಹೀಗಾಗಿ ಉದ್ದೇಶವೂರ್ವಕವಾಗಿಯೇ ಇಂಗ್ಲೆಂಡ್ ಆರಂಭಿಕ ಜೋಡಿ ಸಮಯ ವ್ಯರ್ಥ ಮಾಡಿ ದಿನದಾಟ ಅಂತ್ಯಗೊಳಿಸಲು ಮುಂದಾಗಿತ್ತು. ಇತ್ತ ಇದ್ದ ಅಲ್ಪ ಸಮಯದೊಳಗೆ ಎಷ್ಟು ಸಾಧ್ಯವೊ ಅಷ್ಟು ಓವರ್ಗಳನ್ನು ಎಸೆಯುವ ನಿರ್ಧಾರದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬ್ಯಾಟರ್ಗಳ ಈ ನಾಟಕ ಸ್ಪಷ್ಟವಾಗಿ ತಿಳಿಯಿತು.
ಮೈದಾನದಲ್ಲೇ ಹೈಡ್ರಾಮಾ
ಇದೇ ಸಂದರ್ಭದಲ್ಲಿ ಜಸ್ ಪ್ರೀತ್ ಬುಮ್ರಾ ತಮ್ಮ 2ನೇ ಓವರ್ ವೇಳೆ ಇಂಗ್ಲೆಂಡ್ ಬ್ಯಾಟರ್ ಝಾಕ್ ಕ್ರಾಲಿ ಸಮಯ ವ್ಯರ್ಥ ಮಾಡಿದರು. ಈ ವೇಳೆ ಬೌಲರ್ ಬುಮ್ರಾ ಮತ್ತು ನಾಯಕ ಶುಭ್ ಮನ್ ಗಿಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬುಮ್ರಾ ಚಪ್ಪಾಳೆ ತಟ್ಟುವ ಮೂಲಕ ಇಂಗ್ಲೆಂಡ್ ಬ್ಯಾಟರ್ ಗಳ ಸ್ಪಿರಿಟ್ ಆಪ್ ಗೇಮ್ ಅನ್ನು ವ್ಯಂಗ್ಯ ಮಾಡಿದರೆ, ಇತ್ತ ನಾಯಕ ಶುಭ್ ಮನ್ ಗಿಲ್ ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂಗ್ಲೆಂಡ್ ಬ್ಯಾಟರ್ ಗಳ ಚಳಿ ಬಿಡಿಸಿದ ಗಿಲ್
ಜಸ್ಪ್ರೀತ್ ಬುಮ್ರಾ ಎಸೆದ 2ನೇ ಓವರ್ನ 5ನೇ ಎಸೆತವು ಇಂಗ್ಲೆಂಡ್ ಆಟಗಾರ ಝಾಕ್ ಕ್ರಾಲಿ ಗ್ಲೌಸ್ಗೆ ತಾಗಿದೆ. ಇದನ್ನೆ ನೆಪ ಮಾಡಿಕೊಂಡ ಕ್ರಾಲಿ ಕ್ರೀಸ್ನಿಂದ ಹೊರಗೆ ನಿಂತು ನೋವಾಗುತ್ತಿದೆ ಎಂದು ನಾಟಕ ಮಾಡಲಾರಂಭಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ಆಟಗಾರರು ಝಾಕ್ ಕ್ರಾಲಿಯ ಈ ನಾಟಕವನ್ನು ಚಪ್ಪಾಳೆ ತಟ್ಟುತ್ತಾ ಗೇಲಿ ಮಾಡಿದರು.
ಅಲ್ಲದೆ ಜ್ಯಾಕ್ ಕ್ರಾಲಿ ಹಲವಾರು ಬಾರಿ ಸ್ಕ್ರೀಜ್‌ನಿಂದ ದೂರ ಸರಿದು ಸಮಯ ವ್ಯರ್ಥ ಮಾಡಿದರು. ಇದಕ್ಕೆ ಭಾರತದ ನಾಯಕ ಶುಭ್‌ಮನ್ ಗಿಲ್ ಜ್ಯಾಕ್ ಕ್ರಾಲಿಯ ಬಳಿ ಬಂದು ತಮ್ಮ ಕೋಪವನ್ನು ವ್ಯಕ್ತಪಡಿಸಲು ಕೈಯಿಂದ ಸನ್ನೆ ಮಾಡಿದರು. “ಕೊನೆಯವರೆಗೂ ಆಡುವಷ್ಟು ತಾಕತ್ತು ಪ್ರದರ್ಶಿಸು” ಎಂದು ಜಾಕ್ ಕ್ರಾಲಿಗೆ ಸವಾಲೆಸೆದರು. ಆದಾದ ನಂತರ ಇಬ್ಬರ ನಡುವೆ ಕೆಲಕ್ಷಣಗಳವರೆಗಿನ ವಾಗ್ವಾದಕ್ಕೆ ಕಾರಣವಾಯಿತು.
ಆದರೆ ಇಷ್ಟಕ್ಕೆ ಸುಮ್ಮನಾಗದ ಜ್ಯಾಕ್ ಕ್ರಾಲಿ, ಕೆಲವು ಎಸೆತಗಳ ನಂತರ ಮತ್ತೆ ಸಮಯ ವ್ಯರ್ಥ ಮಾಡುವ ತಂತ್ರಗಾರಿಕೆಗೆ ಮೊರೆ ಹೋದರು. ಡಕೆಟ್ ಜೊತೆ ಮಾತನಾಡಲು ತೆರಳಿದ ಕ್ರಾಲಿ ಅವರಿಗೆ ಭಾರತೀಯ ಆಟಗಾರರು ವ್ಯಂಗ್ಯ ಮಾಡಲು ಚಪ್ಪಾಳೆ ತಟ್ಟಿದರು. ಈ ವೇಳೆ ಮತ್ತೊಮ್ಮೆ ಕ್ರಾಲಿ ಬಳಿ ಬಂದ ಗಿಲ್, ವಾಗ್ವಾದಕ್ಕಿಳಿದರು. ಇದಾದ ಬಳಿಕ ಮತ್ತೋರ್ವ ಆಟಗಾರ ಬೆನ್ ಡಕೆಟ್ ಹಾಗೂ ಶುಭ್‌ಮನ್ ಗಿಲ್ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಮಧ್ಯಪ್ರವೇಶಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಶುಭ್‌ಮನ್ ಗಿಲ್ ಅವರ ಈ ವಾರ್ನಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Advertisement