
ಪ್ರಯಾಗ್‌ರಾಜ್: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕ್ರಿಕೆಟಿಗ ಯಶ್ ದಯಾಳ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಮುಂದಿನ ವಿಚಾರಣೆಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವ ದಯಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ಅವರ ಪರ ವಕೀಲ ಗೌರವ್ ತ್ರಿಪಾಠಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ದಯಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
27 ವರ್ಷದ ಯಶ್ ದಯಾಳ್ ವಿರುದ್ಧ ಜುಲೈ 6 ರಂದು ಗಾಜಿಯಾಬಾದ್ ಜಿಲ್ಲೆಯ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸೆಕ್ಷನ್ 69 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮದುವೆಯ ನೆಪದಲ್ಲಿ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಯಶ್ ದಯಾಳ್ ಮೇಲಿದೆ.
ದೂರುದಾರರ ಪ್ರಕಾರ, ಇಬ್ಬರೂ ಸುಮಾರು ಐದು ವರ್ಷಗಳ ಹಿಂದೆ ಭೇಟಿಯಾದೆವು. ದಯಾಳ್ ಮದುವೆಯ ಆಮಿಷವೊಡ್ಡಿ ತನ್ನನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ್ದಾರೆ. ಮದುವೆ ವಿಷಯವನ್ನು ದಯಾಳ್ ಮುಂದೂಡುತ್ತಲೇ ಇದ್ದರು ಮತ್ತು ಅಂತಿಮವಾಗಿ ದಯಾಳ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ತಿಳಿಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ.
ಆರಂಭದಲ್ಲಿ ಜೂನ್ 21 ರಂದು ಮುಖ್ಯಮಂತ್ರಿಗಳ ಆನ್‌ಲೈನ್ ದೂರು ಪೋರ್ಟಲ್ (ಐಜಿಆರ್ಎಸ್) ಮೂಲಕ ಸಂತ್ರಸ್ತೆ ಯಶ್ ದಯಾಳ್ ಅವರ ವಿರುದ್ಧ ದೂರು ಸಲ್ಲಿಸಿದ್ದರು.
Advertisement